ವಚನ- ಸಂವಿಧಾನದ ಆಶಯಗಳು ಒಂದೇ ಆಗಿವೆ: ಅರುಣ

| Published : May 14 2024, 01:03 AM IST

ಸಾರಾಂಶ

ಕರ್ನಾಟಕದ ಸಂದರ್ಭದಲ್ಲಿ ‘ಬುದ್ಧ ಬಸವ ಅಂಬೇಡ್ಕರ್’ ಎನ್ನುವ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಕಾರಣ ಬುದ್ಧನ ಆಶಯಗಳು 12ನೇ ಶತಮಾನದ ವಚನಗಳಲ್ಲಿ ಮರುಮಂಡನೆಯಾಗಿವೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಎಲ್ಲರನ್ನೂ ಭೇದಭಾವ ಇಲ್ಲದೆ ನಮ್ಮವರೆಂದು ಭಾವಿಸಬೇಕು ಎನ್ನುವುದು ವಚನ ಮತ್ತು ಸಂವಿಧಾನದ ಆಶಯಗಳು ಒಂದೇ ಆಗಿವೆ ಎಂದು ರಾಮಜಿನಗರದಲ್ಲಿ ನಡೆದ ಬಸವ ಜಯಂತಿಯ ವಿಶೇಷ ಉಪನ್ಯಾಸದಲ್ಲಿ ಲೇಖಕ ಅರುಣ್ ಜೋಳದಕೂಡ್ಲಿಗಿ ಹೇಳದರು.

ಬಸವ ಪ್ರಜ್ಞೆ ವಿಚಾರ ವೇದಿಕೆ ಯಡಿ ರಾಮಜೀನಗರದಲ್ಲಿ‌ ಆಯೋಜಿಸಲಾಗಿರುವ ಬಸವ ಜಯಂತಿ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇವನಾರವ ಇವನಾರವ ಎಂದೆಣಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎನ್ನುವ ಬಸವಣ್ಣನ ವಚನದ ಆಶಯ ಭಾರತ ಸಂವಿಧಾನದ ಪ್ರಸ್ತಾವನೆಯ ಭಾರತದ ಜನತೆಯಾದ ನಾವುಗಳು.. ಎನ್ನುವಲ್ಲಿ ಹೋಲಿಕೆಯಾಗುತ್ತದೆ ಎಂದರು.

ಕರ್ನಾಟಕದ ಸಂದರ್ಭದಲ್ಲಿ ‘ಬುದ್ಧ ಬಸವ ಅಂಬೇಡ್ಕರ್’ ಎನ್ನುವ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಕಾರಣ ಬುದ್ಧನ ಆಶಯಗಳು 12ನೇ ಶತಮಾನದ ವಚನಗಳಲ್ಲಿ ಮರುಮಂಡನೆಯಾಗಿವೆ, ಅಂತೆಯೇ ಡಾ. ಅಂಬೇಡ್ಕರ್ ಧರ್ಮಾಂತರ ಮಾಡಲು ನಡೆಸಿದ ಅಧ್ಯಯನದಲ್ಲಿ ಲಿಂಗಾಯತ ಧರ್ಮವನ್ನು ಅಧ್ಯಯನ ಮಾಡಿ ಬಸವಣ್ಣನ ಬಗ್ಗೆ ಅಂಬೇಡ್ಕರ್ ಬರೆದಿದ್ದಾರೆ. ಅಂತೆಯೇ ಎಸ್.ಎಂ. ಹುನಶಾಲ್ ಅವರು 1947ರಲ್ಲಿ ಬರೆದ ‘ಲಿಂಗಾಯತ ಮೂವ್ ಮೆಂಟ್’ ಎನ್ನುವ ಕೃತಿಯನ್ನು ರಚಿಸುವಾಗ ಡಾ‌. ಅಂಬೇಡ್ಕರ್ ಅವರು 1936ರಲ್ಲಿ ಬರೆದ ‘ಅನಿಲೇಷನ್ ಆಫ್ ಕಾಸ್ಟ್’ ಕೃತಿಯನ್ನು ಓದಿ ಪ್ರಭಾವಿತರಾಗಿದ್ದಾರೆ. ಹೀಗೆ ನಾವು ಬುದ್ಧ-ಬಸವ-ಅಂಬೇಡ್ಕರ್ ಅವರನ್ನು ಒಟ್ಟಾಗಿಯೇ ನೋಡಬೇಕು ಎಂದರು. ಸಮತೆಯ ಆಶಯದ ಹಿನ್ನೆಲೆಯಲ್ಲಿ ಈ ಮೂವರ ಜತೆ ಕಾರ್ಲ್ ಮಾರ್ಕ್ಸ್ ಅವರನ್ನೂ ಸೇರಿಸಿಕೊಳ್ಳಬೇಕು. ಅಸಮಾನತೆಯ ವಿರುದ್ಧದ ಬಸವಣ್ಣನ ಹೋರಾಟವನ್ನು ನೋಡಿದರೆ ನಾವು ಕಾಮ್ರೇಡ್ ಬಸವಣ್ಣ ಎಂದು ಕರೆಯಬೇಕು ಎಂದರು.

ಬಸವಣ್ಣ ಅವರು ತಮ್ಮ 70 ವಚನಗಳಲ್ಲಿ ವೈದಿಕಶಾಹಿಯನ್ನು ವಿರೋಧಿಸಿದ್ದಾರೆ. ನೂರು ಶರಣರು 1700ರಷ್ಟು ವಚನಗಳಲ್ಲಿ ವೈದಿಕಶಾಹಿ, ಸನಾತನ ಧರ್ಮದ ಮೌಢ್ಯಗಳನ್ನು ಬಹಳ ಕಟುವಾಗಿ ವಿರೋಧಿಸಿದ್ದಾರೆ. ಹೀಗಿರುವಾಗ ಇಂದು ಯಾರು ವೈದಿಕಶಾಹಿಯನ್ನು ಬೆಂಬಲಿಸಿ‌ ಸನಾತನ ಧರ್ಮವನ್ನು ಆಚರಿಸುತ್ತಾರೋ ಅವರು ಬಸವದ್ರೋಹಿಗಳಾಗುತ್ತಾರೆ. ಇಂದು ಉಳ್ಳವರು ಬಸವನನ್ನು ನಾಮಮಾತ್ರಕ್ಕೆ ಕೇವಲ ಆರಾಧನೆಗೆ ಸೀಮಿತರಾಗಿದ್ದಾರೆ. ಬಸವಣ್ಣನ ಫೋಟೋ ಮನೆಯಲ್ಲಿ ಹಾಕಿಕೊಂಡೂ ಜಾತೀಯತೆ ಮಾಡುತ್ತಾರೆ. ನಿಜಾರ್ಥದಲ್ಲಿ‌ ರಾಮ್ ಜಿ ನಗರದಂತಹ ದುಡಿವಜನರ ದುಡಿಮೆಯಲ್ಲಿ ಬಸವಣ್ಣ ನೆಲೆಸಿದ್ದಾನೆ ಎಂದರು.

ಬಸವ ಜಯಂತಿಯ ಆಚರಣೆ ಮಾಡಬೇಕಾದವರು ಯಾರು? ಯಾರು ಬಸವ ತತ್ವವನ್ನು ಒಪ್ಪಿ ಬದುಕಿನಲ್ಲಿ ಆಚರಿಸುತ್ತಿರುವರೊ ಅವರು ಬಸವ ಜಯಂತಿ ಮಾಡಲು ಅರ್ಹತೆ ಹೊಂದಿರುತ್ತಾರೆ. ಬಸವ ತತ್ವವನ್ನು ಒಪ್ಪದ ವೈದಿಕಶಾಹಿ ನಂಬಿಕೆ ಹೊಂದಿದವರನ್ನು ಬಸವ ಜಯಂತಿಗೆ ಕರೆಯುವ ಅಗತ್ಯವೂ ಬರುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ ನೀಲಾ ಹೇಳಿದರು.

ಬಸವ ಮತ್ತು ಶರಣರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮತ್ತು ವಚನ ಚಿಂತನೆಗಳನ್ನು ತಿರುಚುವ ಹುನ್ನಾರವು ಹುರಿಗೊಳ್ಳುತ್ತಿದೆ. ಆದ್ದರಿಂದಲೇ ಬಸವ ಜಯಂತಿಯಂದು ಬಸವೋತ್ಸವ ಸಮಿತಿಯ ವೇದಿಕೆಯಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದ ಅರುಣ ಜೋಳದ ಕೂಡ್ಲಗಿ ಅವರ ಉಪನ್ಯಾಸವನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಬುದ್ಧ ಬಸವ ಅಂಬೇಡ್ಕರ್ ಪ್ರಜ್ಞೆ ಇರುವ ಎಲ್ಲರೂ ಇದನ್ನು ತೀವ್ರವಾಗಿ ಖಂಡಿಸಬೇಕಿದೆ. ವಚನ ವಿರೋಧಿಗಳನ್ನು ವೇದಿಕೆಯ ಮೇಲೆ ವಿಜೃಂಭಿಸುವ ಪ್ರವೃತ್ತಿಯು ಅಪಾಯಕಾರಿಯಾಗಿದೆ. ವೈದಿಕಶಾಹಿ-ಪುರೋಹಿತಶಾಹಿ ನಂಬಿಕೆಯುಳ್ಳವರು ಎಂದಿಗೂ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳನ್ನು ಒಪ್ಪಲಾರರು. ಈ ಸ್ಪಷ್ಟತೆಯು ಜಯಂತಿ ನಡೆಸುವ ಸಂಘ ಸಂಸ್ಥೆ ಮತ್ತು ಆ ವ್ಯಕ್ತಿಗಳಿಗೂ ಇರುವ ಅಗತ್ಯವಿದೆ ಎಂದರು.

ಶಿವಶರಣ ಮುಳೆಗಾಂವ, ಡಾ.ಶಿವಗಂಗಾ ರುಮ್ಮ ಬಸವಾದಿ ಶರಣರ ಚಿಂತನೆಗಳ ಪ್ರಸ್ತುತತೆಯನ್ನು ಹೇಳಿದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಚಂದಮ್ಮ ಅಧ್ಯಕ್ಷತೆ ವಹಿಸಿದ್ದರು. ವಕೀಲ ಶಾಂತೇಷ ಕೋಡ್ಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಯುವ ಸಂಘಟನೆಯ ಸಾಂಸ್ಕೃತಿಕ ವಿಭಾಗದಿಂದ ಲವಿತ್ರ, ಸುಜಾತಾ, ಬೃಂದಾ, ಪ್ರಿಯಾಂಕ, ಸವ್ಯ ಇವರಿಂದ ವಚನ ಮತ್ತು ಕ್ರಾಂತಿ ಗೀತೆಗಳನ್ನು ಹಾಡಲಾಯಿತು.