ಸಾಣೇಹಳ್ಳಿಯಲ್ಲಿ ಜುಲೈ1ರಿಂದ ವಚನ ಕಮ್ಮಟ

| Published : Jun 19 2024, 01:05 AM IST

ಸಾರಾಂಶ

ಐದು ದಿನಗಳ ಕಾಲ 19 ಗೋಷ್ಠಿ । 50 ರಿಂದ 60 ಸ್ವಾಮಿಜಿಗಳ ಭಾಗಿ: ಸಾಣೇಹಳ್ಳಿ ಶ್ರೀ

ಕನ್ನಡಪ್ರಭ ವಾರ್ತೆ ಹೊಸದುರ್ಗಜನರಿಗೆ ಮಾರ್ಗದರ್ಶಕ ಕೇಂದ್ರಗಳಾಗಬೇಕಿದ್ದ ಮಠಗಳಲ್ಲಿ ಇಂದು ಮೌಡ್ಯ, ಅಜ್ಞಾನ, ಕಂದಾಚಾರ ತುಂಬಿ ತುಳುಕುತ್ತಿದೆ ಹಾಗಾಗಿ ಸ್ವಾಮಿಗಳಿಗೆ ಬಸವ ತತ್ವ ಪ್ರಜ್ಞೆ ಮೂಡಿಸಿದರೆ ಅವರ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದು ಎಂಬ ಅನೇಕರ ಅಭಿಲಾಶೆಯಂತೆ ಸಾಣೇಹಳ್ಳಿಯಲ್ಲಿ ಜು.1ರಿಂದ 5 ರವರೆಗೆ ವಚನ ಕಮ್ಮಟ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶ್ರೀಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಸವ ಪರಂಪರೆಯ ಮಠಗಳು ಬಸವ ತತ್ವ ಹೇಳುತ್ತವೆ ಆದರೆ ಅವುಗಳಿಗೆ ವಿರುದ್ಧವಾದ ಆಚರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಹಾಗಾಗಿ ಪೀಠಾಧಿಪತಿಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈಗಾಗಲೇ 27 ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಬರಲು ನೊಂದಣಿ ಮಾಡಿಕೊಂಡಿದ್ದು, ಸುಮಾರು 50 ರಿಂದ 60 ಸ್ವಾಮೀಜಿಗಳು ಭಾಗವಹಿಸುವ ನೀರೀಕ್ಷೆ ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಠಾಧಿಪತಿಗಳಿಗೆ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗುವುದು ಎಂದರು.

ಕಮ್ಮಟ ನಡೆಯುವ 5 ದಿನಗಳ ಕಾಲ ಸುಮಾರು 19 ಗೋಷ್ಠಿಗಳು ನಡೆಯಲಿದ್ದು, ಚಿಂತಕರಿಂದ ಉಪನ್ಯಾಸ ನಂತರ ಸ್ವಾಮೀಜಿಗಳಿಂದ ಸಂವಾದ ನಡೆಯಲಿದೆ. ಘೋಷ್ಠಿ ಕಾರ್ಯಕ್ರಮಕ್ಕೆ ಸ್ವಾಮೀಜಿಗಳಿಗೆ ಮಾತ್ರ ಅವಕಾಶವಿದ್ದು ಸಂಜೆ ನಡೆಯುವ ನಾಟಕ ಸೇರಿದಂತೆ ವಚನ ನೃತ್ಯ ಗಾಯನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಪ್ರತಿದಿನ ಬೆಳಗ್ಗೆ ಯೋಗಾಸನ, ಶಿಬಿರಾರ್ಥಿಗಳಿಂದ ಇಷ್ಟಲಿಂಗ ಪೂಜೆ ನಂತರ ಶಿವಧ್ವಜಾರೋಹಣ ನಂತರ ಶಿವ ಮಂತ್ರಲೇಖನ ನಡೆಯಲಿದೆ.

ಜು.1ರಂದು ಬೆಳಗ್ಗೆ 10 ಗಂಟೆಗೆ ವಚನ ಕಮ್ಮಟದ ಉದ್ಘಾಟನೆ ನಡೆಯಲಿದ್ದು, ಬಾಲ್ಕಿಯ ಹಿರೇಮಠದ ನಾಡೋಜ, ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠ ಶ್ರೀ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸುವರು. ಶರಣ ತತ್ವ ಚಿಂತಕ ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡುವರು.

ನಂತರ ಮಧ್ಯಾಹ್ನ 12 ರಿಂದ 2 ರವರೆಗೆ ನಡೆಯುವ ಗೋಷ್ಠಿಯಲ್ಲಿ ವಚನಗಳು ಮತ್ತು ವಚನ ಧರ್ಮದ ಆಶಯ ಕುರಿತಂತೆ ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಉಪನ್ಯಾಸ ನೀಡುವರು. ಮಧ್ಯಾಹ್ನ 3 ರಿಂದ 5 ರವರೆಗೆ ನಡೆಯುವ ಗೋಷ್ಠಿಯಲ್ಲಿ ವಿವಿಧ ಧರ್ಮಗಳ ಸಂಕ್ಷಿಪ್ತ ಪರಿಚಯ ಕುರಿತಂತೆ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಮಾತನಾಡುವರು. ಸಂಜೆ 5 ರಿಂದ 6 ರವರೆಗೆ ನಡೆಯುವ ಗೋಷ್ಠಿಯಲ್ಲಿ ಸ್ಥಾವರ-ಜಂಗಮ ವಿಷಯ ಕುರಿತಂತೆ ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲರು ಉಪನ್ಯಾಸ ನೀಡುವರು. ರಾತ್ರಿ 7 ರಿಂದ 8 ರವರೆಗೆ ನಡೆಯುವ ಗೋಷ್ಠಿಯಲ್ಲಿ ಮೂಢಾಚರಣೆಗಳು ವಿಷಯ ಕುರಿತಂತೆ ಶಿವನಕೆರೆ ಬಸವಲಿಂಗಪ್ಪ ಮಾತನಾಡುವರು. ಸಾಣೇಹಳ್ಳಿಯ ಆರ್ ಅದಿತಿ, ವಚನ ನೃತ್ಯ ನಡೆಸಿಕೊಡುವರು.

ಜು.5ರಂದು ಮಧ್ಯಾಹ್ನ 3 ಗಂಟೆಗೆ ಕಮ್ಮಟದ ಸಮಾರೋಪ ಸಮಾರಂಭ ನಡೆಯಲಿದ್ದು ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮಿಗಳು ಹಾಗೂ ಬೇಲಿ ಮಠದ ಶ್ರೀ ಶಿವಾನುಭ ಚರಮೂರ್ತಿ ಶಿವರುದ್ರ ಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸುವರು.

ವಚನ ಕಮ್ಮಟಕ್ಕೆ ಬರುವವರಿಗೆ ಮನವಿ:

1 ಕಮ್ಮಟಕ್ಕೆ ಬರುವವರು ಜೂನ್ 20ರೊಳಗೆ ತಮ್ಮ ಒಪ್ಪಿಗೆಯ ಪತ್ರ ಕಳಿಸಬೇಕು.2 ಐದು ದಿನಗಳ ಕಾಲ ಶ್ರೀಮಠದಲ್ಲೇ ವಾಸವಾಗಿರಬೇಕು

3 ಶ್ರೀ ಮಠದಲ್ಲೇ ಪೂಜೆ, ಪ್ರಸಾದ ಮತ್ತು ವಸತಿಯ ವ್ಯವಸ್ಥೆ

4 ಪ್ರತಿನಿತ್ಯ ಯೋಗಾಸನ, ವಚನ ಸಂಗೀತ, ಇಷ್ಟಲಿಂಗ ಪೂಜೆ, ಉಪನ್ಯಾಸ, ಸಂವಾದ ಇತ್ಯಾದಿ ಚಟುವಟಿಕೆಗಳಿರುತ್ತವೆ

5 ಶಿಬಿರದಲ್ಲಿ ಭಾಗವಹಿಸುವ ಮಠಾಧೀಶರು ಮತ್ತು ಮುಂದೆ ಸ್ವಾಮಿಗಳಾಗುವವರು ಜೂ. 30 ರಂದೇ ಸಾಣೇಹಳ್ಳಿಗೆ ಬರಬೇಕು

6 ವಿವರವಾದ ಮಾಹಿತಿ ತಮ್ಮ ಒಪ್ಪಿಗೆ ಪತ್ರದ ನಂತರ ತಿಳಿಸಲಾಗುವುದು

7 ಪೂರ್ವಸಿದ್ಧತೆಗಾಗಿ ಭಾಗವಹಿಸುವವರ ಮಾಹಿತಿ ಆದಷ್ಟು ಬೇಗ ತಿಳಿಸಬೇಕು

8 ಹೆಚ್ಚಿನ ಮಾಹಿತಿಗಾಗಿ ಟಿ.ಎಂ.ಮರುಳಸಿದ್ದಯ್ಯ (9663177254) ಇವರನ್ನು ಸಂಪರ್ಕಿಸಬಹುದು

ಇಂದಿನ ನಟ-ನಟಿಯರಿಂದ ದೆವ್ವದ ವರ್ತನೆ: ಹೊಸದುರ್ಗ: ಇತ್ತೀಚಿನ ದಿನಗಳಲ್ಲಿ ಚಿತ್ರನಟ-ನಟಿಯರನ್ನು ಅಭಿಮಾನಿಗಳು ದೇವರೆಂದು ಭಾವಿಸಲಾಗುತ್ತಿದೆ. ಹಿಂದಿನ ಕೆಲ ನಟರು ದೇವರಂತೆ ನಡೆದುಕೊಂಡಿದ್ದಾರೆ ಆದರೆ ಇಂದಿನ ನಟ-ನಟಿಯರು ದೆವ್ವಗಳಂತೆ ವತಿಸುತ್ತಿದ್ದಾರೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಬೇಸರ ವ್ಯಕ್ತ ಪಡಿಸಿದರು.

ರೇಣುಕಾಸ್ವಾಮಿ ಕೊಲೆ ಸಂಬಂದ ಸಾಣೇಹಳ್ಳಿ ಶ್ರೀ ಮಠದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸಿದ ಶ್ರೀಗಳು, ಚಿತ್ರನಟ ನಟಿಯರಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಾದಂತೆ ಗುಂಪುಗಾರಿಕೆ ಹೆಚ್ಚುತ್ತಿದೆ. ತಮ್ಮ ಸುತ್ತ ಅಭಿಮಾನಿಗಳ ತಂಡವನ್ನು ರಚಿಸಿಕೊಳ್ಳಲಾಗುತ್ತಿದೆ. ಇಂತಹ ಅಭಿಮಾನಿ ತಂಡದಲ್ಲಿದ್ದವರು ಜವಬ್ದಾರಿಯಿಲ್ಲದವರಾಗಿದ್ದು ಕೇವಲ ಹುಚ್ಚೆದ್ದು ಕುಣೀಯುವವರಾಗಿದ್ದಾರೆ ಎಂದರು.

ಹಿಂದೆ ಸಾಣೇಹಳ್ಳಿಗೆ ದರ್ಶನ್‌ ಬಂದಿದ್ದರು ಆಗ ಸರಳವಾಗಿದ್ದರು. ರಂಗ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ನಟನೆಯ ಮೂಲಕ ಜನರಿಗೆ ಸಾಮಾಜಿಕ ಕಳಕಳಿ ಮೂಡಿಸಬೇಕಾದ ಇವರು ಈ ರೀತಿ ಮೃಗೀಯ ವರ್ತನೆ ಮಾಡಿರುವುದು ಸರಿಯಲ್ಲ. ಎಲ್ಲಾ ಜನರಲ್ಲೂ ದೌರ್ಬಲ್ಯಗಳಿರುತ್ತವೆ ಆದರೆ ಯಾವ ಕ್ರೂರಿಯೂ ಇಂತಹ ಕೆಲಸ ಮಾಡಲಾರ ಇದೊಂದು ಅಮಾನುಷ ಕೆಲಸ ಎಂದರು. ಪೋಲೀಸರು ತುಂಬಾ ಜವಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರೂರಿಗಳಿಗೆ ನೀಡುವ ಶಿಕ್ಷೆ ಇನ್ನೊಬ್ಬರಿಗೆ ಎಚ್ಚರಿಕೆ ನೀಡುವಂತಿರಬೇಕು ಎಂದು ತಿಳಿಸಿದರು.