ಸಾರಾಂಶ
- ಕಕ್ಕರಗೊಳ್ಳ ದಿಲೀಪ್ ಶರ್ಮ ನಿರ್ದೇಶನದ ಸಿನಿಮಾ ಬಗ್ಗೆ ಬಸವಪ್ರಭು ಶ್ರೀ ಶ್ಲಾಘನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಉತ್ತರ ಭಾರತದಿಂದಲೇ ಮಹಾನ್ ಮಾನವತಾವಾದಿ, ಮಹಾನ್ ಶರಣ ಬಸವಣ್ಣನವರ ಹತ್ಯೆಗೆ ಸಂಚು ಹಾಕಿ ವ್ಯಕ್ತಿಯೊಬ್ಬನನ್ನು ಕಳಿಸುವ ದೃಶ್ಯದೊಂದಿಗೆ ಆರಂಭವಾಗುವ ಶರಣರ ಶಕ್ತಿ ಸಿನಿಮಾ ಕಥೆ 12ನೇ ಶತಮಾನದ ಅನುಭವ ಮಂಟಪದ ಬಸವಾದಿ ಶರಣ-ಶರಣೆಯರ ಎದುರಿಸಿದ ಸವಾಲು, ಸಂಕಷ್ಟಗಳನ್ನು ತಿಳಿಸಿಕೊಡುವಲ್ಲಿ ಪ್ರಯತ್ನವಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ತ್ರಿಶೂಲ್ ಚಿತ್ರ ಮಂದಿರದಲ್ಲಿ ಶುಕ್ರವಾರ ಉದಯೋನ್ಮುಖ ನಿರ್ದೇಶಕ ಕಕ್ಕರಗೊಳ್ಳದ ದಿಲೀಪ್ ಶರ್ಮಾ ನಿರ್ದೇಶಿಸಿ, ನಟಿಸಿರುವ ಶರಣರ ಶಕ್ತಿ- ತಡಿವ್ಯಾರ... ನೋಡು....! ಸಿನಿಮಾವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವ, ಗೊಲ್ಲಾಳೇಶ್ವರ, ಅಕ್ಕ ನಾಗಮ್ಮ, ಅಕ್ಕ ಮಹಾದೇವಿ, ಸಂಕವ್ವೆ, ಹರಳಯ್ಯ, ಶೀಲವಂತ ಹೀಗೆ ಪ್ರತಿಯೊಂದು ಪಾತ್ರವನ್ನು 2 ಗಂಟೆ ಸಿನಿಮಾದಲ್ಲಿ ಕಟ್ಟಿಕೊಡುವ ಕೆಲಸವನ್ನು ದಿಲೀಪ ಶರ್ಮ ಮತ್ತು ತಂಡ ಪ್ರಾಮಾಣಿಕವಾಗಿ ಮಾಡಿದೆ ಎಂದು ಶ್ಲಾಘಿನಿಸಿದರು.
ಅನುಭವ ಮಂಟಪದ ಆರಂಭದಿಂದ ಅಂತ್ಯದವರೆಗೆ ಶರಣ-ಶರಣೆಯರು ಎದುರಿಸಿದ ಸವಾಲು, ಸಂಕಷ್ಟಗಳನ್ನು ಕಟ್ಟಿಕೊಡಲಾಗಿದೆ. ಅಂದಿನ ಜಾತಿ ವ್ಯವಸ್ಥೆ, ಮೇಲು-ಕೀಳು, ಬಡವ- ಬಲ್ಲಿದನೆಂಬ ಅಂತರ, ಬಸವಣ್ಣನವರ ಹತ್ಯೆಗೆ ಸಂಚುಗಳು ಹೀಗೆ 12ನೇ ಶತಮಾನದ ಶರಣರ ಯುಗವನ್ನು ಆರಂಭದಿಂದ ಅಂತ್ಯದವರೆಗೆ ಕಟ್ಟಿಕೊಟ್ಟು, ಚನ್ನಬಸವಣ್ಣ ಲಿಂಗೈಕ್ಯ ಆದ ನಂತರ ಶರಣ-ಶರಣೆಯರ ನಾಡಿನ ಎಲ್ಲ ಕಡೆ ಹೊರಟಿದ್ದನ್ನು ತೋರಿಸುವ ಮೂಲಕ, ಚನ್ನಬಸವಣ್ಣ ಶರಣ-ಶರಣೆಯರನ್ನು ಕಲಿಯುಗ ಇರುವವರೆಗೂ ಕಾಯುವ ಘೋಷಣೆ ಮಾಡುವವರೆಗೂ ಕಣ್ಣಿಗೆ ಕಟ್ಟುವಂತೆ ತೋರಿಸುವ ಕೆಲಸ ಸಿನಿಮಾದಲ್ಲಿ ಆಗಿದೆ ಎಂದ ಅವರು, ಪ್ರತಿಯೊಬ್ಬರೂ ಚಿತ್ರ ಮಂದಿರಕ್ಕೆ ಬಂದು, ಶರಣರ ಶಕ್ತಿ ಸಿನಿಮಾ ವೀಕ್ಷಿಸುವ ಮೂಲಕ ಚಿತ್ರತಂಡಕ್ಕೆ ಪ್ರೋತ್ಸಾಹಿಸಬೇಕು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಹಿರಿಯ ಕಲಾವಿದ ಆರ್.ಟಿ.ಅರುಣಕುಮಾರ, ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಜಿ.ಬಸವನಗೌಡ್ರು, ರಾಮಕೃಷ್ಣ ಶಾನುಬೋಗರು, ಮಹಾಂತೇಶ ಗೌಡ, ವಿರೂಪಾಕ್ಷಪ್ಪ ಗೌಡ, ಅನಸೂಯ ಮಹಾಂತೇಶ ಗೌಡ, ಚಿತ್ರದ ನಿರ್ದೇಶಕ ದಿಲೀಪ್ ಶರ್ಮ, ನಿರ್ಮಾಪಕಿ ಆರಾಧನಾ ಕುಲಕರ್ಣಿ, ಕುಮಾರ, ಸಂಗೀತ ನಿರ್ದೇಶಕ ವಿನು ಮನಸು, ಕ್ಯಾಮರಾಮನ್ ಮುಂಜಾನೆ ಮಂಜು, ಸಚಿನ್ ಮಾದನಗೇರಿ, ಗಿರೀಶಗೌಡ ಪಾಟೀಲ, ಶಶಿಧರ ಬಸಾಪುರ, ಅನಿಲಕುಮಾರ, ಸುಜಾತಾ ಅನಿಲಕುಮಾರ, ಪ್ರಭಾಕರ ತುಮ್ಮಿನಕಟ್ಟೆ, ಸುರೇಶ, ಸುರೇಂದ್ರ ಸಿಂಗ್, ನಾಸಿರ್, ಹಸೇನ್ ಸಾಬ್ ಇತರರು ಇದ್ದರು.
- - -ಬಾಕ್ಸ್ * ಸಮಾನತೆ ಸಂದೇಶ ಸಾರುವ ಚಿತ್ರಕಾಂಗ್ರೆಸ್ ಯುವ ಮುಖಂಡ, ಉದ್ಯಮಿ ಶಿವಗಂಗಾ ವಿ.ಶ್ರೀನಿವಾಸ ಮಾತನಾಡಿ, ಆತ್ಮೀಯರಾದ ನಿರ್ದೇಶಕ ದಿಲೀಪ್ ಶರ್ಮ, ಸ್ನೇಹಿತ, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಸೇರಿದಂತೆ ನಮ್ಮೂರಿನವರೇ ನಿರ್ಮಿಸಿದ ಚಿತ್ರ ಇದಾಗಿದೆ. ಸಮಾನತೆ ಸಂದೇಶ ಸಾರುವ ಈ ಸಿನಿಮಾವನ್ನು ರಾಜ್ಯ, ರಾಷ್ಟ್ರದ ಭವಿಷ್ಯವಾದ ವಿದ್ಯಾರ್ಥಿಗಳು, ಯುವಜನರಿಗೆ ರಿಯಾಯಿತಿ ದರದಲ್ಲಿ ಪ್ರದರ್ಶಿಸುವ ಕೆಲಸವಾಗಬೇಕು. ಸಚಿವರು, ಶಾಸಕರು, ಮುಖಂಡರ ಮುಖಾಂತರ ಸರ್ಕಾರದ ಮಟ್ಟದಲ್ಲಿ ಇಂತಹ ಪ್ರಯತ್ನವನ್ನು ಚಿತ್ರದ ನಿರ್ದೇಶಕರು, ನಿರ್ಮಾಪಕರು ಮಾಡಬೇಕಿದೆ ಎಂದು ಹೇಳಿದರು.
- - - -29ಕೆಡಿವಿಜಿ1:ದಾವಣಗೆರೆ ತ್ರಿಶೂಲ್ ಚಿತ್ರಮಂದಿರದಲ್ಲಿ ಕಕ್ಕರಗೊಳ್ಳದ ದಿಲೀಪ್ ಶರ್ಮ ನಿರ್ದೇಶನದ "ಶರಣರ ಶಕ್ತಿ " ಸಿನಿಮಾ ಪ್ರದರ್ಶನಕ್ಕೆ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. ಕಾಂಗ್ರೆಸ್ ಯುವ ಮುಖಂಡ ಶಿವಗಂಗಾ ಶ್ರೀನಿವಾಸ, ಇತರರು ಇದ್ದರು.