ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯಕ್ಕೆ ಹೊಸಬೆಳಕು ತಂದುಕೊಟ್ಟಿದ್ದು ವಚನ ಸಾಹಿತ್ಯ ಎಂದು ಶಾಸ್ತ್ರೀಯ ಭಾಷಾ ಕನ್ನಡ ಅತ್ಯುನ್ನತ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಹೇಳಿದರು.ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜನ್ಮದಿನಾಚರಣೆಯಲ್ಲಿ ಗೌಡರ ಸಿದ್ದಪ್ಪ ಮತ್ತು ಶರಣೆ ಮರಮ್ಮ ದತ್ತಿ ಉಪನ್ಯಾಸ ನೀಡಿದ ಅವರು,
ಇಂತಹ ಸಾಹಿತ್ಯವನ್ನು ಸಂರಕ್ಷಿಸಿ, ನಮಗೆ ಉಳಿಸಿಕೊಟ್ಟ ಕೀರ್ತಿ ಡಾ.ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.ಕಲ್ಯಾಣಕ್ರಾಂತಿಯ ನಂತರ ಓಲೆಗರಿಯಲ್ಲಿದ್ದ ಸಾಹಿತ್ಯವನ್ನು ಯಾವಾಗಲೋ ತೆಗೆದು ಪೂಜೆ ಮಾಡಿ, ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದರು. ಇದನ್ನು ಗಮಸಿದ ಹಳಕಟ್ಟಿ ಅವರು ಹುಚ್ಚು ಹಿಡಿದವರಂತೆ ವಚನಗಳ ಕಟ್ಟು, ಓಲೆಗರಿಗಳ ಸಂಗ್ರಹಕ್ಕೆ ಇಳಿದರು. ಸೈಕಲ್‌ನಲ್ಲಿ ಓಡಾಟ, ಪ್ರೆಸ್ ಹಾಗೂ ಶಿವಶರಣರ ಸಾಹಿತ್ಯ- ಈ ಮೂರು ಅವರ ದ್ಯೇಯವಾಗಿತ್ತು. ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಸರಳವಾಗಿ ಬದುಕಿ, ಘನವಾದ ಸಾಧನೆ ಮಾಡಿದರು. ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಕಟ್ಟಿದರು. ಕೆರೆ ಅಭಿವೃದ್ದಿಪಡಿಸಿದರು. ನೇಕಾರರ ಸಹಕಾರ ಸಂಘ ರಚಿಸಿ, ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ವಿದ್ಯಾರ್ಥಿಗಳು ಕೂಡ ಹಳಕಟ್ಟಿ ಅವರಂತೆ ಸರಳತೆ ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ, ಸಂಸ್ಕೃತಿ ಅಧ್ಯಯನ ಮಾಡಬೇಕು,. ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ವಚನ ಸಾಹಿತ್ಯ, ಕುವೆಂಪು ಸಾಹಿತ್ಯ ಓದುವುದು ಎಂದರೇ ಅಮೃತ ಘಳಿಗೆ. ಆದ್ದರಿಂದ ಮಹಾಪುರುಷರ ಬದುಕಿನ ಕಥನ ಓದಿ. ಆ ಮೂಲಕ ಬದುಕನ್ನು ಉತ್ತಮಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಡಾ.ಫ.ಗು. ಹಳಕಟ್ಟಿ ಅವರು ಮನೆಯನ್ನು ಮಾರಾಟ ಮಾಡಿ, ಮುದ್ರಣಾಲಯ ಸ್ಥಾಪಿಸಿ, ವಚನ ಸಾಹಿತ್ಯ ಮುದ್ರಿಸಿ, ಪ್ರಚುರಪಡಿಸಿದರು ಎಂದರು.ದತ್ತಿ ದಾಸೋಹಿಗಳಾದ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಕಲ್ಯಾಣಕ್ರಾಂತಿಯ ನಂತರ ಚದುರಿ ಹೋಗಿದ್ದ ವಚನಗಳನ್ನು ಹಳಕಟ್ಟಿ ಅವರು ಸಂಗ್ರಹಿಸಿದ್ದರಿಂದ ಈಗ 24 ಸಾವಿರ ವಚನಗಳು ಲಭ್ಯವಿವೆ ಎಂದರು.
ಯುವಜನತೆ ಆರ್‌ಸಿಬಿ ವಿಜಯೋತ್ಸವ, ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂತಹ ಕಡೆ ಗಮನ ನೀಡುವ ಬದಲು ನಮ್ಮ ದೇಹವೇ ದೇಗುಲ ಎಂದು ಭಾವಿಸಬೇಕು. ನಮ್ಮ ವಚನ ಸಾಹಿತ್ಯ, ಸಂಸ್ಕೃತಿಯನ್ನು ಅರಿಯಬೇಕು ಎಂದರು.ಶರಣ ಸಾಹಿತ್ಯ ಪರಿಷತ್ತು ಮೈಸೂರು ತಾ. ಅಧ್ಯಕ್ಷ ದೇವರಾಜ ಪಿ. ಚಿಕ್ಕಹಳ್ಳಿ ಮಾತನಾಡಿ, ಫ.ಗು. ಹಳಕಟ್ಟಿ ಅವರು ಕರ್ನಾಟಕ ವಿವಿಯ ಗೌರವ ಡಾಕ್ಟರೇಟ್ ಸ್ವೀಕರಿಸಲು ಹರಿದ ಅಂಗಿ ಮೇಲೆ ಕೋಟು ಹಾಕಿಕೊಂಡು ಹೋಗಿದ್ದರು. ಈ ರೀತಿಯ ಸರಳತೆ ಮೈಗೂಡಿಸಿಕೊಳ್ಳಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳಹರಹುಂಡಿ ಸಿದ್ದಪ್ಪ ಮಾತನಾಡಿ, ವಚನ ಸಾಹಿತ್ಯ ಕರ್ನಾಟಕದ ಸಂಪತ್ತು ಎಂದರು.ಶರಣರ ಕ್ಷೇತ್ರಗಳನ್ನು ರಕ್ಷಿಸಬೇಕು. ಶರಣ ಸಾಧಕರ ಬಗ್ಗೆ ಅಧ್ಯಯನಗಳಾಗಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿ, ಶರಣರ ವಿಚಾರಧಾರೆಗಳನ್ನು ಪ್ರಚುರಪಡಿಸಲು ನೂರಾರು ದತ್ತಿಗಳಿವೆ. ಪ್ರತಿದಿನ ಮೂರು ಕಾರ್ಯಕ್ರಮಗಳನ್ನು ಮಾಡಬಹುದು. ಈ ಪರಿಷತ್ ಸ್ಥಾಪನೆಗೆ ಸುತ್ತೂರು ಮಠದ ಹಿಂದಿನ ಶ್ರೀ ರಾಜೇಂದ್ರ ಶ್ರೀಗಳು ಕಾರಣ. ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಸೌಮ್ಯಾ ಈರಪ್ಪ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಜಂಕ್ ಫುಡ್ ತಿನ್ನಬಾರದು. ಗ್ರಂಥಾಲಯಕ್ಕೆ ಭೇಟಿ ನೀಡಿ, ಪುಸ್ತಕಗಳನ್ನು ಓದಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ. ಲಾವಣ್ಯ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಬಿ.ಕೆ. ರಶ್ಮಿ ವಂದಿಸಿದರು, ಸಹಾಯಕ ಪ್ರಾಧ್ಯಾಪಕ ಕೆ.ಎಂ.ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ರುಚಿತಾ ರಾಜೇಶ್ ಪ್ರಾರ್ಥಿಸಿದರು.