ಸಾರಾಂಶ
ಪರಿಸರ ಸಂರಕ್ಷಣೆಯತ್ತ ಕವಿಗಳು ಕಾವ್ಯದಲ್ಲಿ ಇರುವ ಆಸಕ್ತಿಯನ್ನು ವ್ಯಕ್ತಪಡಿಸುವ ಅಗತ್ಯವಿದೆ. ನಿತ್ಯ ಬದುಕಿನ ಹತ್ತಾರು ಪ್ರಸಂಗಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿ ಸಾಹಿತ್ಯ ಬದುಕಿಗೆ ಹತ್ತಿರವಾಗಬೇಕು.
ಧಾರವಾಡ:
ಹನ್ನೆರಡನೆಯ ಶತಮಾನ ಸಂದರ್ಭದಲ್ಲಿ ವಚನ ಸಾಹಿತ್ಯ ಮಹತ್ತರ ಭಕ್ತಿಯ ಕ್ರಾಂತಿಗೆ ಕಾರಣವಾದರೆ, ಇಂದಿನ ಚುಟುಕು ಸಾಹಿತ್ಯ ಬದುಕಿನ ಅರಿವಿಗೆ ಮಾರ್ಗದರ್ಶಿ ಸಂದೇಶವನ್ನು ನೀಡುತ್ತದೆ ಎಂದು ನಿವೃತ್ತ ಶಿಕ್ಷಕ, ಸಾಹಿತಿ ಕೆ.ಎಚ್. ನಾಯಕ ಹೇಳಿದರು.ನಗರದ ಪರಿಸರ ಭವನದಲ್ಲಿ ನಾಗರಿಕ ಪರಿಸರ ಸಮಿತಿ ಹಾಗೂ ಎಸ್.ಡಿ.ಎಂ. ನಾರಾಯಣ ಹೃದಯಾಲಯ ವತಿಯಿಂದ ಭಾನುವಾರ ಸಮಾವೇಶಗೊಂಡ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕಿನ 8ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿ, ಪರಿಸರ ಸಂರಕ್ಷಣೆಯತ್ತ ಕವಿಗಳು ಕಾವ್ಯದಲ್ಲಿ ಇರುವ ಆಸಕ್ತಿಯನ್ನು ವ್ಯಕ್ತಪಡಿಸುವ ಅಗತ್ಯವಿದೆ. ನಿತ್ಯ ಬದುಕಿನ ಹತ್ತಾರು ಪ್ರಸಂಗಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿ ಸಾಹಿತ್ಯ ಬದುಕಿಗೆ ಹತ್ತರವಾಗುವಂತೆ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಈಶ್ವರನಗರದ ದಕ್ಷಿಣ ವೈಷ್ಣವದೇವಿ ಮಂದಿರದ ದೇವಪ್ಪಜ್ಜನವರು ಸಮ್ಮೇಳನಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಎಸ್.ಡಿ.ಎಂ. ನಾರಾಯಣ ಹೃದಯಾಲಯದ ಡಾ. ಕೀರ್ತಿ ಆರೋಗ್ಯದ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಕೆ.ಎಚ್. ನಾಯಕ ಅವರಿಗೆ "ಚುಟುಕು ಚೇತನ " ಗೌರವ ಪ್ರಶಸ್ತಿ ನೀಡಿ ಹಾಗೂ ದೇವಪ್ಪಜ್ಜ ಅವರನ್ನು ಗೌರವಿಸಲಾಯಿತು. ಎಂ.ಎಂ. ಚಿಕ್ಕಮಠ ಅಭಿನಂದನಾಪರ ಮಾತನಾಡಿದರು. ಪರಿಮಳ ಜಕ್ಕನವರ ಪರಿಸರ ಗೀತೆ ಹಾಡಿದರು. ಅಖಂಡ ಧಾರವಾಡ ಜಿಲ್ಲಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಘಟಕದ ವಂದನಾ ರಮೇಶ ಹಾಗೂ ವೀರೇಶ ಕುಬಸದ ಕಾರ್ಯಕ್ರಮ ನಿರೂಪಿಸಿದರು.
ಆನಂತರ ಮಹಿಳಾ ಮಂಡಳದ ಸದಸ್ಯೆಯರಿಗಾಗಿ ಪರಿಸರ ಗೀತೆಗಳ ಸ್ಪರ್ಧೆ, ಕವಿಗೋಷ್ಠಿ, ಸಮಾರೋಪ ಸಮಾರಂಭ ಜರುಗಿದವು.