ವಚನ ಸಾಹಿತ್ಯ ಅಪೂರ್ವ ಕೊಡುಗೆ

| Published : Jul 18 2024, 01:40 AM IST

ಸಾರಾಂಶ

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಅಲ್ಲ. ಒಬ್ಬರೆ ಎಂಬುದು ಈ ಹಿಂದಿನ ವಿದ್ವಾಂಸರ ಅಭಿಪ್ರಾಯಗಳು. ಈಗ ದೊರೆತ ಶಾಸನಗಳು ಮತ್ತು ಕನ್ನಡ ಕಾವ್ಯಗಳನ್ನು ಆಧರಿಸಿ ದಾಸಿಮಯ್ಯನ ಬಗೆಗಿನ ಗೊಂದಲಗಳಿಗೆ ತೆರೆ ಎಳೆದರು.

ಧಾರವಾಡ:

ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿದ ವಚನ ಸಾಹಿತ್ಯ ಅಪೂರ್ವ ಕೊಡುಗೆ. ಆದರೆ ಕೆಲವೇ ಕೆಲವು ವಚನಕಾರರ ಬಗೆಗೆ ಉಪನ್ಯಾಸ, ಚರ್ಚೆ, ಅಧ್ಯಯನಗಳು ನಡೆಯುತ್ತಿವೆ. ಕೆಳವರ್ಗಗಳಿಂದ ಬಂದ ಅನೇಕ ವಚನಕಾರರ ಬಗೆಗೆ ಚರ್ಚೆ, ಸಂವಾದಗಳು ಇಲ್ಲವಾಗಿವೆ ಎಂದು ಕವಿವಿ ಪಂಪ ಅಧ್ಯಯನ ಪೀಠದ ಸಂಯೋಜಕ ಡಾ. ಜೆ.ಎಂ. ನಾಗಯ್ಯ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆದ್ಯ ವಚನಕಾರ ‘ದೇವರ ದಾಸಿಮಯ್ಯ ಜಯಂತ್ಯುತ್ಸವ’ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಶಾಸನಗಳಲ್ಲಿ ದೇವರ ದಾಸಿಮಯ್ಯ ಮತ್ತು ದುಗ್ಗಳೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಆದ್ಯ ವಚನಕಾರ ದೇವರದಾಸಿಮಯ್ಯನವರಂಥ ಮಹತ್ವದ ವಚನಕಾರರು ಅಂಚಿಗೆ ತಳ್ಳಲ್ಪಟ್ಟಿದ್ದು ಬೇಸರದ ಸಂಗತಿ ಎಂದರು.

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಅಲ್ಲ. ಒಬ್ಬರೆ ಎಂಬುದನ್ನು ಈ ಹಿಂದಿನ ವಿದ್ವಾಂಸರ ಅಭಿಪ್ರಾಯಗಳು. ಈಗ ದೊರೆತ ಶಾಸನಗಳು ಮತ್ತು ಕನ್ನಡ ಕಾವ್ಯಗಳನ್ನು ಆಧರಿಸಿ ದಾಸಿಮಯ್ಯನ ಬಗೆಗಿನ ಗೊಂದಲಗಳಿಗೆ ತೆರೆ ಎಳೆದರು. ದಾಸಿಮಯ್ಯನ ಹತ್ತು ಮತ್ತು ದುಗ್ಗಳೆಯ ಮೂರು ಶಾಸನಗಳನ್ನು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಂ. ಷಡಕ್ಷರಯ್ಯ ಮಾತನಾಡಿ, ದಾಸಿಮಯ್ಯನ ಚರಿತ್ರೆ ನಿರ್ಮಾಣಕ್ಕೆ ಪ್ರೊ. ಜೆ.ಎಂ. ನಾಗಯ್ಯನವರ ಅವರ ಉಪನ್ಯಾಸ ಪೂರಕವಾಗಿದೆ ಎಂದರು.

ಮಹಾದೇವ ಕರಮರಿ, ವಚನಕಾರರ ಕೊಡುಗೆ ಸ್ಮರಿಸಿದರು. ದತ್ತಿದಾನಿ ಪ್ರಸನ್ನ ರಾಮಚಂದ್ರ ಗೆದ್ದೆಣ್ಣವರ ಅವರು ದಾಸಿಮಯ್ಯನ ಕುರಿತು ಬೆಳಕಿಗೆ ಬಂದ ಹೊಸ ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಮಹೇಶ ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ ಇದ್ದರು.