ಸಾರಾಂಶ
ಮುಂದಿನ ವರ್ಷ ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ (ಬೀದರ್)
ಸರ್ವ ಸಮಾಜದ ಅಭಿವೃದ್ಧಿಗಾಗಿ ನಾವು ಜಾರಿಗೆ ತಂದಿರುವ 5 ಗ್ಯಾರಂಟಿಗಳನ್ನು ನಮ್ಮ ಅಧಿಕಾರಾವಧಿಯ 5 ವರ್ಷ ಕಾಲವೂ ಜಾರಿಯಲ್ಲಿಡುತ್ತೇವೆ. ಅಪಪ್ರಚಾರ ನಂಬಬೇಡಿ.
ಅಲ್ಲದೆ ಮುಂದಿನ ವರ್ಷ ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಸವಕಲ್ಯಾಣದ ಥೇರ್ ಮೈದಾನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆ ವಿಶ್ವಬಸವ ಧರ್ಮ ಟ್ರಸ್ಟ್ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ವರ್ಷಕ್ಕೆ 56 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸಲಿದ್ದೇವೆ. ಅದಾಗ್ಯೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಇದನ್ನು ನಂಬಬೇಡಿ ಎಂದರು.
ಇದೊಂದು ಅವಿಸ್ಮರಣೀಯ, ಜೀವನದಲ್ಲಿ ಚಿರಸ್ಮರಣೀಯವಾದ ಅಭಿನಂದನಾ ಸಮಾರಂಭ. ಈ ಅಭಿನಂದನೆಯನ್ನು ಕರ್ನಾಟಕದ 7 ಕೋಟಿ ಜನರಿಗೆ ಸಲ್ಲಿಸುತ್ತೇನೆ.
ಇನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಕೋರಿಕೆಯಂತೆ ಮುಂದಿನ ವರ್ಷ ವಚನ ಸಾಹಿತ್ಯ ವಿಶ್ವ ವಿದ್ಯಾಲಯ ಸ್ಥಾಪನೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು.
ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಇದೇ ನಮ್ಮ ಸರ್ಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ, ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇವೆ ಎಂದರು.
2013ರಿಂದ 2018ರ ವರೆಗೆ ನಾವು ಅಧಿಕಾರದಲ್ಲಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ಜನರ ವಿಶ್ವಾಸ, ಪ್ರೀತಿಯನ್ನು ಗಳಿಸುವ ಪ್ರಯತ್ನ ಮಾಡಿದೇವು.
ನಂತರ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಭರವಸೆಯನ್ನು ಅಧಿಕಾರಕ್ಕೇರುತ್ತಿದ್ದಂತೆ 38 ಸಾವಿರ ಕೋಟಿ ರು. ಖರ್ಚು ಮಾಡಿ ಜಾರಿಗೆ ತಂದಿದ್ದೇವೆ ಎಂದು ವಿವರಿಸಿದರು.
ಕನ್ನಡಿಗರ, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ.
ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿದೆ. ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ.
ಬಸವಮೃತ್ಯುಂಜಯ ಸ್ವಾಮೀಜಿ, ಮಾತೆ ಗಂಗಾದೇವಿ, ಪ್ರಣವಾನಂದ ಸ್ವಾಮೀಜಿ, ಬೆಲ್ದಾಳ್ ಸಿದ್ದರಾಮ ಶರಣರು, ಶಿವಾನಂದ ಸ್ವಾಮಿಗಳು, ಚನ್ನವೀರ ಶಿವಾಚಾರ್ಯರು, ಸಿದ್ದರಾಮೇಶ್ವರ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ.
ಸಚಿವರಾದ ಎಂ.ಬಿ ಪಾಟೀಲ್, ರಹೀಮ್ ಖಾನ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರ ಶಿವಶಂಕರಪ್ಪ, ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕ ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಚನ್ನಾರೆಡ್ಡಿ.
ಮಾಜಿ ಶಾಸಕ ವಿಜಯಸಿಂಗ್, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಗೋ.ರು ಚನ್ನಬಸಪ್ಪ, ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ, ಸಾಗರ ಖಂಡ್ರೆ, ಧನರಾಜ ತಾಳಂಪಳ್ಳಿ, ಆನಂದ ದೇವಪ್ಪ, ದತ್ತಾತ್ರೆಯ ಮೂಲಗೆ, ರಾಜಶ್ರೀ ಶ್ರೀಕಾಂತ ಸ್ವಾಮಿ ಸೇರಿದಂತೆ ಅನೇಕರು ಇದ್ದರು.