ಜನರಿಗೆ ಸರಳವಾಗಿ ಸಾಹಿತ್ಯ ತಲುಪಿಸುವ ವಚನ: ಕವಿತಾ

| Published : Feb 11 2025, 12:45 AM IST

ಸಾರಾಂಶ

ಕಾಯಕ ಶರಣ ಜಯಂತಿ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ನಡೆಯಿತು. ಯಾವುದೇ ಕೆಲಸ ಮಾಡಿದರೂ ಆ ಕೆಲಸದ ಮೇಲೆ ನಮಗೆ ಪ್ರೀತಿ ಇರಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಾಯಕ ಶರಣರ ಜಯಂತಿ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆಯಿತು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕವಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ ದಾಸೋಹ ವಚನಗಳಿಂದ ಹೆಸರುವಾಸಿಯಾಗಿರುವ ಕಾಯಕ ಶರಣರು ವಚನಗಳ ಮೂಲಕ ಬಹಳ ಸರಳವಾಗಿ ಕನ್ನಡ ಸಾಹಿತ್ಯದಲ್ಲಿ ಜನರಿಗೆ ಸಂದೇಶಗಳನ್ನು ತಿಳಿಸುತ್ತಿದ್ದವರು ಎಂದು ಹೇಳಿದರು.

ಕಾಯಕದಿಂದ ದೇವರನ್ನು ಪೂಜಿಸುವ ಬದಲಾಗಿ ಕಾಯಕವನ್ನು ಮಾಡುತ್ತಾ ದೇವರನ್ನು ಕಂಡವರು ಅಲ್ಲದೇ ಕಾಯಕಗಳಿಂದ ಯಾವುದೇ ಜಾತಿಯನ್ನು ಗುರುತಿಸಬಾರದು ಯಾವ ಕಾಯಕವು ದೊಡ್ಡದಲ್ಲ ಎಂದು ತಿಳಿಸಿಕೊಟ್ಟವರು ಕಾಯಕ ಶರಣರು ಎಂದರು.

ಯಾವುದೇ ಕೆಲಸ ಮಾಡಿದರೂ ಆ ಕೆಲಸದ ಮೇಲೆ ನಮಗೆ ಪ್ರೀತಿ ಇರಬೇಕು. ಪ್ರೀತಿ ಇದ್ದಾಗ ಮಾತ್ರ ನಾವು ಉತ್ತಮ ರೀತಿಯಲ್ಲಿ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಎಲ್ಲಾ ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ವ್ಯಕ್ತಿತ್ವವನ್ನು ಬೆಳೆಸುವಂತಹ ಪಾಠಗಳನ್ನು ಅವರಿಗೆ ತಿಳಿಸಿಕೊಡಬೇಕು ಎಂದರು.

ಎಲ್ಲಾ ವಚನಕಾರರ ಉದ್ದೇಶಗಳು ಒಂದೇ ಆಗಿದ್ದವು. 12ನೇ ಶತಮಾನದಲ್ಲಿ ಬಸವಾದಿ ಶರಣರು ಕೈಗೊಂಡಂತಹ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಗಳು ಕೂಡ ಅಭೂತಪೂರ್ವವಾದದ್ದು. ಹಾಗೆಯೇ ಅವರ ಕಾಯಕನಿಷ್ಠೆ, ಆದರ್ಶ, ತತ್ವಗಳು, ನಡೆನುಡಿಗಳಲ್ಲೊಂದಾಗಿಸಿ ಕೈಗೊಂಡಂತಹ ಕೆಲಸ ಕಾರ್ಯಗಳು ಇಂದು ಜಾಗತಿಕ ಮಟ್ಟದಲ್ಲಿ ಒಂದು ವಿಶ್ವ ಮಾನ್ಯತೆಯನ್ನು ಪಡೆದಿದೆ ಎಂದು ಸೋಮವಾರಪೇಟೆ ತಾಲೂಕಿನ ನಿವೃತ್ತ ಮುಖ್ಯೋಪಾಧ್ಯಾಯ ಜಲಜಾಕ್ಷಿ ಅವರು ತಿಳಿಸಿದರು.

ಜೆ.ಸಿ.ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ಶಿಕ್ಷಕರು ಮತ್ತಿತರರು ಇದ್ದರು.