ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಐತಿಹಾಸಿಕ ಶ್ರೀಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಮೇಲುಕೋಟೆಯ ರಾಜಬೀದಿಯಲ್ಲಿ ಸಹಸ್ರಾರು ಮಂದಿ ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು.ಸಾಕ್ಷಾತ್ ಶ್ರೀಮನ್ನಾರಾಯಣನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಚೆಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾ ಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ ೮.೦೮ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ ೩.೩೦ ಗಂಟೆವರೆಗೂ ಸಾಂಗೋಂಪಾಂಗವಾಗಿ ನಡೆಯಿತು.ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ವೈರಮುಡಿ ಮೆರವಣಿಗೆ:ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ ೫.೩೦ರ ವೇಳೆಗೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ಶ್ರೀಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರ ನೇತತ್ವದ ಅಧಿಕಾರಿಗಳ ತಂಡದ ಉಸ್ತುವಾರಿಯಲ್ಲಿ ವೈರಮುಡಿ ಹಾಗೂ ರಾಜಮುಡಿ ಕಿರೀಟ ಮತ್ತು ಆಭರಣಗಳನ್ನು ಪರಿಶೀಲನೆ (ಪರ್ಕಾವಣೆ)ನಡೆಸಿ ನಂತರ ಪ್ರಧಾನ ಅರ್ಚಕರಿಗೆ ಹಸ್ತಾಂತರಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ವೈರಮುಡಿಯನ್ನು ಪಡೆದು ಶ್ರೀರಾಮಾನುಜ ಚಾರ್ಯರ ಸನ್ನಿಧಿಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳೊಂದಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಅಣಿಗೊಳಿಸಲಾಯಿತು.
ರಾತ್ರಿ ೮ ಕ್ಕೆ ಡಾ.ಕುಮಾರ ಅವರು ಪುಷ್ಪಾರ್ಚನೆ ಮಾಡಿದರು. ಬಳಿಕ ಶ್ರೀಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಗೋವಿಂದ ನಾಮ ಸ್ಮರಣೆಯ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.ದೇವಾಲಯದ ಚತುರ್ವೀದಿಗಳಲ್ಲೂ ವೈರಮುಡಿ ಉತ್ಸವ ನೋಡಲು ಕಾತರದಿಂದ ಕಾಯುತ್ತಿದ್ದರು. ತಮ್ಮ ಬಳಿಗೆ ಬಂದ ವೈರಮುಡೀ ಕಿರೀಟಧಾರಣೆಯ ಚೆಲುವನ ಸೊಬಗನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಹಲವು ಭಕ್ತರು ವೈರಮುಡಿಯಿಂದ ಅಲಂಕತನಾದ ಗರುಡಾರೂಢ ಶ್ರೀ ಚಲುವನಾರಾಯಣನನ್ನು ಕಂಡು ಭಾವಪರವಶರಾದದ್ದು ಕಂಡುಬಂತು.
ದೀಪಾಲಂಕಾರ:ವೈರಮುಡಿ ಉತ್ಸವದ ಅಂಗವಾಗಿ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ, ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಕಲ್ಯಾಣಿ, ಮಂಟಪಗಳಿಗೆ, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಭದ್ರತೆ:ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ೫ ಮಂದಿ ಡಿವೈಎಸ್ಪಿಗಳು, ೩೪ ಸಿಪಿಐ, ೭೯ ಪಿಎಸ್‌ಐ, ೧೨೮ ಎಎಸ್‌ಐ, ೬೬೪ ಮುಖ್ಯಪೇದೆ, ಪೇದೆಗಳು, ೮೬ ಮಹಿಳಾ ಪೇದೆಗಳು, ೧೦೦ ಗೃಹರಕ್ಷಕದಳ ಸಿಬ್ಬಂದಿ ಸೇರಿ ೧೦೯೬ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿತ್ತು. ಕಲ್ಯಾಣಿಯ ಬಳಿ ಐದು ಮಂದಿ ನುರಿತ ಈಜುಗಾರರು, ತುರ್ತು ಅವಘಡಗಳ ನಿರ್ವಹಣೆಗಾಗಿ ಎರಡು ಅಗ್ನಿಶಾಮಕ ವಾಹನ, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
ದಾಸೋಹ ವ್ಯವಸ್ಥೆದೇವಾಲಯದ ಸಮಿತಿ ವತಿಯಿಂದ ಈ ವರ್ಷದಿಂದ ದಾಸೋಹ ಭವನದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ವೈರಮುಡಿ ಬ್ರಹ್ಮೋತ್ಸವ ದಿನವಾದ ಸೋಮವಾರ ಬೆಳಗ್ಗೆ ೮ ಗಂಟೆಯಿಂದ ಏ.೮ರ ಬೆಳಗ್ಗೆ ೮ ಗಂಟೆಯವರೆಗೆ ನಿರಂತರವಾಗಿ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
೪೦ ಸೀಸಿ ಕ್ಯಾಮೆರಾ ಅಳವಡಿಕೆಭದ್ರತೆಯ ದೃಷ್ಟಿಯಿಂದ ದೇವಾಲಯ ಮತ್ತು ಗ್ರಾಮದ ಪ್ರಮುಖ ಭಾಗಗಳಲ್ಲಿ ೪೦ ಶಾಶ್ವತ ಸೀಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದುವರೆಗೂ ವೈರಮುಡಿ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ಸೀಸಿ ಕ್ಯಾಮೆರಾ ಅಳವಡಿಸಲಾಗುತ್ತಿತ್ತು. ಈ ಬಾರಿಯಿಂದ ೧೯ ಲಕ್ಷ ರು. ವೆಚ್ಚದಲ್ಲಿ ೪೦ ಸೀಸಿ ಕ್ಯಾಮೆರಾಗಳನ್ನು ಶಾಶ್ವತವಾಗಿ ಅಳವಡಿಸಿದೆ
ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಗಮನವೈರಮುಡಿ ಬ್ರಹ್ಮೋತ್ಸವ ವೀಕ್ಷಣೆಗೆ ಈ ಬಾರಿ ಸುಮಾರು ೧ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನವರೆಗೆ ವಯಸ್ಸಾದವರಿಗೆ ಸಂಚರಿಸಲು ಅನುಕೂಲವಾಗಲು ೧೦ ಉಚಿತ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು ಸಾರ್ವಜನಿಕರು, ಭಕ್ತರ ಓಡಾಟಕ್ಕೆ ತೊಂದರೆಯಾಗದಂತೆ ವಾಹನ ದಟ್ಟಣೆ ನಿರ್ವಹಣೆಗೆ ಅಗತ್ಯ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.