ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ದೇಶದ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ದೇಶ ಕಂಡ ಅಪ್ರತಿಮ ನಾಯಕ ಮತ್ತು ಭಾರತ ದೇಶದ ಅಭಿವೃದ್ಧಿಯ ಹರಿಕಾರರು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಅವರು ಸೋಮವಾರ ಬನಹಟ್ಟಿ ನಗರದ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿ ಜನ್ಮದಿನಾಚರಣೆ ನಿಮಿತ್ತ ನಡೆದ ಸಮಾರಂಭದಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವುದು ಕೂಡಾ ನಮ್ಮ ರಾಷ್ಟ್ರದ ಅಳಿಲು ಸೇವೆ ಮಾಡಿದಂತೆ. ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿ. ಹಿರಿಯರ ಆದರ್ಶಗಳನ್ನು ಪಾಲಿಸಿ, ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಪಕ್ಷ ಸಂಘಟನೆಗೆ ತಾವೇಲ್ಲರೂ ಕಂಕಣ ಬದ್ಧರಾಗಿರಿ ಎಂದರು.
ಇಂದಿನ ಬಿಜೆಪಿ ಕಾರ್ಯಕರ್ತರಿಗೆ ವಾಜಪೇಯಿ ಅವರ ತತ್ವ, ಆದರ್ಶಗಳು ಮಾದರಿಯಾಗಬೇಕು. ರಸ್ತೆಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂಬುವುದನ್ನು ತಿಳಿದುಕೊಂಡು ದೇಶದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದ ಕೀರ್ತಿ ಶ್ರೇಯಸ್ಸು ವಾಜಪೇಯಿ ಅವರದು. ಅದೇ ರೀತಿಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು ಎಂದು ಸವದಿ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಮಾತನಾಡಿದರು. ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ತೇರದಾಳ ಗ್ರಾಮೀಣ ಅಧ್ಯಕ್ಷ ಸುರೇಶ ಅಕ್ಕಿವಾಟ, ಶ್ರೀಶೈಲ ಯಾದವಾಡ, ಸುಬಾಸ ಚೋಳಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸವಿತಾ ಹೊಸೂರ, ಕಾರ್ಯದರ್ಶಿ ಪವಿತ್ರಾ ತುಕ್ಕನ್ನವರ, ಶ್ರೀಶೈಲ ಬೀಳಗಿ, ವೈಷ್ಣವಿ ಬಾಗೇವಾಡಿ, ಗೌರಿ ಮಿಳ್ಳಿ, ಆನಂದ ಕಂಪು, ಶಿವಾನಂದ ಬುದ್ನಿ, ಈರಣ್ಣ ಚಿಂಚಖಂಡಿ, ಭೀಮಸಿ ಪಾಟೀಲ, ಪ್ರಭಾಕರ ಮೊಳೇದ, ಚಂದ್ರಶೇಖರ ಮಿರ್ಜಿ, ಯಲ್ಲಪ್ಪ ಕಟಗಿ, ಭೀಮಸಿ ಪೂಜಾರಿ ಸೇರಿದಂತೆ ಅನೇಕರು ಇದ್ದರು.