ಸಾರಾಂಶ
ಮಾಜಿ ಶಾಸಕ ತಿಪ್ಪೆಸ್ವಾಮಿ ಆರೋಪ । ಸಿಎಂ ರಾಜೀನಾಮೆಗೆ ಒತ್ತಾಯಿಸಿ 28ಕ್ಕೆ ಪ್ರಿತಿಭಟನೆ
ಕನ್ನಡಪ್ರಭ ವಾರ್ತೆ ಹಿರಿಯೂರು:
ನಾಯಕ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ₹187 ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ನೆರೆ ರಾಜ್ಯಗಳ ಚುನಾವಣೆಗೆ ಬಳಸಲಾಗಿದೆ ಎಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪ್ರತಿಭಟನಾ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ವಾಲ್ಮೀಕಿ ನಿಗಮದಲ್ಲಿನ ₹187 ಕೋಟಿ ಗೋಲ್‌ಮಾಲ್ ಖಂಡಿಸಿ ಮತ್ತು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರಹೊಣೆ ಎಂದು ಪರಿಗಣಿಸಿ ಅವರ ರಾಜೀನಾಮೆಗೆ ಒತ್ತಾಯಿಸಿ ಇದೆ 28 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದರು ತಿಳಿಸಿದರು.ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೂಲಕ ಹಣ ವರ್ಗಾವಣೆ ಮಾಡಿ ಸಚಿವ ನಾಗೇಂದ್ರ ತಲೆದಂಡ ಮಾಡಿರುವುದು ಎಸ್‌ಟಿ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡದೇ ಸಿದ್ದರಾಮಯ್ಯನವರ ಅಣತಿಯಂತೆ ಆಗಿರುವ ಹಗರಣದ ವಸ್ತು ಸ್ಥಿತಿಯನ್ನು ನಾಡಿನ ಜನರ ಮುಂದಿಡಬೇಕಿತ್ತು. ವಿಪರ್ಯಾಸವೆಂದರೆ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ನಮ್ಮ ಸಮಾಜದ ಶಾಸಕರು, ವಿಧಾನಪರಿಷತ್ ಸದಸ್ಯರು, ಚುನಾಯಿತ ಜನ ಪ್ರತಿನಿಧಿಗಳು ಮೌನವಾಗಿರುವುದು ಖಂಡನೀಯ ಎಂದರು.
ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ ಮಾತನಾಡಿ, ಜಿಲ್ಲೆಯ ಎಲ್ಲಾ ಮಂಡಲಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಸಮಾಜ ಬಂಧುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಹಗರಣದ ರೂವಾರಿಯಾಗಿದ್ದು, ಅಧಿಕಾರಿಯ ಆತ್ಮಹತ್ಯೆಯ ಹೊಣೆ ಹೊರಬೇಕಾಗಿದೆ. ವಾಲ್ಮೀಕಿ ಸಮುದಾಯ ಅನ್ಯಾಯಕ್ಕೊಳಗಾಗಿದ್ದು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪಾತ್ರವಿಲ್ಲದೆ ಇಷ್ಟು ದೊಡ್ಡ ಆರ್ಥಿಕ ಹಗರಣ ಸಾಧ್ಯವಿಲ್ಲದ್ದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದರು.ಚಳ್ಳಕೆರೆ ಬಿಜೆಪಿ ಮುಖಂಡ ಕೆಟಿ ಕುಮಾರಸ್ವಾಮಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ₹187 ಕೋಟಿ ಅವ್ಯವಹಾರವಾಗಿದ್ದು, ಡೆತ್ ನೋಟ್ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಸರ್ಕಾರ ಹಗರಣ ಮುಚ್ಚಿಹಾಕುತ್ತಿತ್ತು. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಇಷ್ಟು ದೊಡ್ಡ ಹಗರಣ ಮಾಡಿರುವ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸಿದ ಹಲವು ವರ್ಷಗಳಲ್ಲಿ ಅದೆಷ್ಟು ಹಗರಣ ನಡೆಸಿ ಮುಚ್ಚಿ ಹಾಕಿರಬಹುದು ಎಂದರು.
ಈ ವೇಖೆ ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ, ಮುಖಂಡರಾದ ಬಸವರಾಜ ನಾಯಕ, ಜೆಬಿ ರಾಜು, ಬಾಳೆಕಾಯಿ ರಾಮದಾಸ್, ಕವನ, ಲೋಕೇಶ್, ಸಿದ್ದೇಶ್, ಸೋಮಣ್ಣ, ಟಿ ಒಬೇನಹಳ್ಳಿ ಶ್ರೀನಿವಾಸ್, ಪ್ರಜ್ವಲ್, ಹರ್ತಿರಾಜ್, ಸುರೇಶ್ ಮುಂತಾದವರು ಹಾಜರಿದ್ದರು.