ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

| Published : Oct 21 2024, 12:46 AM IST

ಸಾರಾಂಶ

ನಮ್ಮ ಕುಸ್ತಿ, ಕಂಬಳ, ಮಲ್ಲಕಂಬ ಮುಂತಾದ ಕಲೆಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಕಲೆ, ಸಂಸ್ಕೃತಿ, ಆಚರಣೆಗಳನ್ನು ಉಳಿಸಿ

ಕನ್ನಡಪ್ರಭ ವಾರ್ತೆ ನಂಜನಗೂಡು

ಗ್ರಾಮೀಣ ಭಾಗದ ಜನಪದ ಕಲೆ ಕ್ರೀಡೆಗಳಲ್ಲಿ ಇಂದಿನ ತಲೆಮಾರಿನ ಯುವಕರು ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿ, ಆಚರಣೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ತಾಲೂಕಿನ ಹೆಡತಲೆ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಭಾನುವಾರ ಕಿಚ್ಚ ಬಾಯ್ಸ್ ಆಯೋಜಿಸಿದ್ದ ತಾಲೂಕು ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಸಂಸ್ಕೃತಿ ನಮ್ಮ ಜನಪದ, ಹಳ್ಳಿಗಾಡಿನ ಕ್ರೀಡೆಗಳನ್ನು ಇಂದಿನ ಯುವಕರಿಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಸಹಕಾರಿಯಾಗಿದೆ ಎಂದರು.

ನಮ್ಮ ಕುಸ್ತಿ, ಕಂಬಳ, ಮಲ್ಲಕಂಬ ಮುಂತಾದ ಕಲೆಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಕಲೆ, ಸಂಸ್ಕೃತಿ, ಆಚರಣೆಗಳನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಯವಕರು ಚಟಗಳಿಗೆ ಬಲಿಯಾಗದೆ, ಸದೃಢ ದೇಹ, ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಬೇಕು. ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಪ್ರಯತ್ನವನ್ನು ಯುವಕರು ಮಾಡುತ್ತಿರುವುದು ಶ್ಲಾಘನಿಯ. ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ನಮ್ಮ ಕ್ಷೇತ್ರದಲ್ಲಿ ನಡೆಯಬೇಕು ಎಂದು ಅವರು ಆಶಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಎತ್ತಿನ ಗಾಡಿ ಓಟದ ಸ್ಪರ್ಧೆಗಳು ಈ ಹಿಂದೆ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿದ್ದವು. ಆ ನಂತರದಲ್ಲಿ ಟೈರ್ ಗಾಡಿಗಳು ಹೆಚ್ಚು ಮುಂಚೂಣಿಗೆ ಬಂದವು. ಮಂಡ್ಯ ಜಿಲ್ಲೆಯಲ್ಲಿ ಟೈಯರ್ ಗಾಡಿಗಳ ಓಟದ ಸ್ಪರ್ಧೆ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಕೋಣಗಳ ಓಟದ ಸ್ಪರ್ಧೆ ಪ್ರಚಲಿತವಾಗಿದೆ. ನಮ್ಮ ತಾಲೂಕಿನಲ್ಲೂ ಹಲವಾರು ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಕ್ರೀಡೆ ಆಯೋಜಕರಾದ ಆನಂದ್ ಮಾತನಾಡಿ, ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ 35 ಜೊತೆ ಎತ್ತುಗಳು ಸ್ಪರ್ಧೆಯಲ್ಲಿದ್ದು, ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 7 ಸಾವಿರ ನಿಗದಿಪಡಿಸಲಾಗಿದೆ ಎಂದರು

ಮುಖಂಡರಾದ ದೊರೆಸ್ವಾಮಿನಾಯಕ, ಮಾದನಾಯಕ, ಮಹದೇವನಾಯಕ, ಪುಟ್ಟರಾಜು, ಶಿವಕುಮಾರ್, ರಾಜು, ಅನಿಲ್ ಮೊದಲಾದವರು ಇದ್ದರು.