ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಬುಡಕಟ್ಟು ಸಮುದಾಯದಲ್ಲಿ ಜನಿಸಿದರೂ ಸಹ ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾ ಕಾವ್ಯ ರಚಿಸುವ ಮೂಲಕ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಹಾಗೂ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ, ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಆಯೋಜಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಮಹರ್ಷಿ ವಾಲ್ಮೀಕಿ ಅವರಂತಹ ಮಹನೀಯರನ್ನು ಒಂದು ಸಮುದಾಯಕ್ಕೆ ಸೀಮತಗೊಳಿದೇ ರಾಷ್ಟ್ರೀಯ ನಾಯಕರನ್ನಾಗಿ ನೋಡಬೇಕು ಎಂದರು.
ವಾಲ್ಮೀಕಿ ಭವನ ಉದ್ಘಾಟನೆ ಎಲ್ಲರ ಕನಸಾಗಿದೆ. ಹಾಗಾಗಿ ಮುಂದಿನ ವರ್ಷದ ಜಯಂತಿಯಂದು ವಾಲ್ಮೀಕಿ ವೃತ್ತ, ವಾಲ್ಮೀಕಿ ಪುತ್ಥಳಿ ಹಾಗೂ ವಾಲ್ಮೀಕಿ ಭವನದ ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ವಾಲ್ಮೀಕಿ ಭವನದ ಕೆಲಸ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.ಜಿಲ್ಲಾಡಳಿತ ಭವನದ ಎದುರಿನಲ್ಲಿ 9.30 ಎಕರೆ ಸರ್ಕಾರಿ ಜಮೀನನ್ನು ಪ್ರೊ. ಎಲ್.ಜಿ. ಹಾವನೂರ ಖಾಯಂ ಟ್ರಸ್ಟ್‌ಗೆ ನೀಡಲು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷರು ಮನವಿ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹಾವನೂರ ಟ್ರಸ್ಟ್‌ಗೆ ಜಮೀನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ರಾಮಾಯಣದ ಜೊತೆಗೆ ರಾಮಾಯಣ ಬರೆದವರನ್ನು ಸ್ಮರಿಸಬೇಕು. ಶಿಕ್ಷಣ ಬಹಳ ಮುಖ್ಯವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.ಹೈಕೋರ್ಟ್ ನ್ಯಾಯವಾದಿ ಅನಂತ್ ನಾಯಕ್ ಮಾತನಾಡಿ, ವಾಲ್ಮೀಕಿ ಅರಿವಿನ ಸಂಕೇತವಾಗಿದ್ದಾರೆ, ಕವಿ, ಲೇಖಕ ಮಾತ್ರವಲ್ಲ ಅರಿವಿನ ಬೆಳಕಾಗಿದ್ದಾರೆ. ಅವರ ಬೆಳಕು ಜಗತ್ತಿನಾದ್ಯಂತ ಹಬ್ಬಿದೆ. ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಅವರು ಕಠಿಣ ಭಾಷೆ ಸಂಸ್ಕೃತವನ್ನು ನಿರ್ಗಳವಾಗಿ ಕಲಿತು ರಾಮಾಯಾಣ ಮಹಾ ಕಾವ್ಯ ಜಗತ್ತಿಗೆ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ನಾಡಿಗೆ ಪ್ರೊ. ಎಲ್.ಜಿ. ಹಾವನೂರ ಕೊಡುಗೆ ಅಪರವಾಗಿದ್ದು, ಜಿಲ್ಲಾಡಳಿತ ಭವನದ ಎದುರಿನಲ್ಲಿ 9.30 ಎಕರೆ ಸರ್ಕಾರಿ ಜಮೀನನ್ನು ಪ್ರೊ. ಎಲ್.ಜಿ. ಹಾವನೂರ ಖಾಯಂ ಟ್ರಸ್ಟ್‌ಗೆ ನೀಡಬೇಕು. ಈ ಜಮೀನಲ್ಲಿ ಹಾವನೂರ ಥೀಮ್ ಪಾರ್ಕ್ ಹಾಗೂ ಮ್ಯೂಜಿಯಂ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಹಾಗೂ ಶಾಸಕರಿಗೆ ಮನವಿ ಮಾಡಿದರು.ಪ್ರತಿಭಾವಂತರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮುದಾಯ ಧೀರಜ ಕರಿಬಸಣ್ಣವರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸಿಂಚನಾ, ಶಿಲ್ಪಾ ಮರಿಯಣ್ಣನವರ, ಮೇಘಾ ನಾಯ್ಕರ ಹಾಗೂ ಭಾರತ ಸರ್ಕಾರದ ಇನ್ಸ್‌ಪಾಯರ್ ವರ್ಡ್‌ನಲ್ಲಿ ಪ್ರದರ್ಶನ ನೀಡಿದ ಸಾಯಿಲಕ್ಷ್ಮೀ ವೀರಾಪೂರ ಅವರನ್ನು ಸನ್ಮಾನಿಸಲಾಯಿತು.ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ತಹಸೀಲ್ದಾರ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಸಮಾಜದ ಮುಖಂಡರಾದ ಜಿ.ಬಿ. ಪಾಟೀಲ, ಬಸವರಾಜ ಹಾದಿಮನಿ, ಅಶೋಕ, ಆನಂದಪ್ಪ, ನಾಗರಾಜ, ಹನುಮಂತಪ್ಪ, ಮಾಲತೇಶ ಇತರರು ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜನಾಯ್ಕ ಸ್ವಾಗತಿಸಿದರು.
ಆಕರ್ಷಕ ಮೆರವಣಿಗೆ:ಕಾರ್ಯಕ್ರಮಕ್ಕೂ ಮುಂಚೆ ನಗರದ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಆಕರ್ಷಕ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಗುರುಭವನ ತಲುಪಿತು. ಶಾಸಕರು ಹಾಗೂ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ತಹಶೀಲ್ದಾರ ಶಂಕರ್, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.