ಪೌರಕಾರ್ಮಿಕರಿಂದ ಸಮಾಜದ ಸ್ವಚ್ಛತೆಗೆ ಅಮೂಲ್ಯ ಕೊಡುಗೆ: ಯಶ್‌ಪಾಲ್ ಸುವರ್ಣ

| Published : Nov 27 2024, 01:03 AM IST

ಪೌರಕಾರ್ಮಿಕರಿಂದ ಸಮಾಜದ ಸ್ವಚ್ಛತೆಗೆ ಅಮೂಲ್ಯ ಕೊಡುಗೆ: ಯಶ್‌ಪಾಲ್ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತೆಯಲ್ಲಿ ಉಡುಪಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲು ಇಲ್ಲಿನ ಪೌರ ಕಾರ್ಮಿಕರ ಶ್ರಮವೇ ಕಾರಣ ಎಂದು ಶಾಸಕ ಯಶ್‌ಪಾಲ್‌ ಎ ಸುವರ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸ್ವಚ್ಛತೆಯಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲು ಇಲ್ಲಿನ ಪೌರಕಾರ್ಮಿಕರ ಶ್ರಮವೇ ಕಾರಣ, ಅವರು ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ಅರಿತು ಸಮಾಜದ ಸ್ವಚ್ಛತೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಶ್ಲಾಘಿಸಿದರು.

ಅವರು ಮಂಗಳವಾರ ನಗರಸಭೆ ವತಿಯಿಂದ ನಗರದ ಅಜ್ಜರಕಾಡುವಿನ ಪುರಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು ಸಮಾಜದ ಆಸ್ತಿ. ಅವರು ತಮ್ಮ ವೃತ್ತಿಯ ಮೂಲಕ ನಗರದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಅವರಿಂದಾಗಿ ಉಡುಪಿ ನಗರಸಭೆಯು ಇತರೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾದರಿಯಾಗಿ ಕರ್ತವ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ . ವಿದ್ಯಾಕುಮಾರಿ ಮಾತನಾಡಿ, ನಗರದ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರ ಆರೋಗ್ಯವೂ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರದ ವತಿಯಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಆಯೋಜಿಸಲಾಗುವ ಆರೋಗ್ಯ ತಪಾಸಣೆಯಲ್ಲಿ ಪೌರ ನೌಕರರು ಮಾಡಿಸಿಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಪರಿಕರ ಉಪಕರಣಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂವಿಧಾನ ದಿನ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆಯೋಜಿಸಲಾದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಉಡುಪಿ ನಗರಸಭಾ ಕಚೇರಿಯಿಂದ ಪುರಭವನದವರೆಗೆ ಪುರ ಮೆರವಣಿಗೆ ನಡೆಯಿತು. ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಜೆ. ಕಲ್ಮಾಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಸಭಾ ಸದಸ್ಯರು, ಪೌರಕಾರ್ಮಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಗರಸಭೆಯ ಆಯುಕ್ತ ಡಾ. ಉದಯ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಹಾವಂಜೆ ನಿರೂಪಿಸಿದರು. ನಗರಸಭೆ ಪರಿಸರ ಅಭಿಯಂತರ ಸ್ನೇಹಾ ಕೆ.ಎಸ್. ವಂದಿಸಿದರು.