ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಶನಿವಾರ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ಪದವಿ ಪ್ರದಾನ ಸಮಾರಂಭದಲ್ಲಿ ಆಳ್ವಾಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಶನಿವಾರ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ಪದವಿ ಪ್ರದಾನ ಸಮಾರಂಭದಲ್ಲಿ ಆಳ್ವಾಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಪದವೀಧರರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದ ನಿಜವಾದ ಉದ್ದೇಶವು ಕೇವಲ ಪದವಿ ಪಡೆಯುವುದಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ. ಪದವಿ ಪ್ರಮಾಣಪತ್ರವು ಕೇವಲ ಒಂದು ಕಾಗದದ ತುಣುಕಾಗಿದ್ದು, ಅದಕ್ಕೆ ನಿಜವಾದ ಮೌಲ್ಯ ದೊರೆಯುವುದು ವ್ಯಕ್ತಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ ಹಾಗೂ ಜೀವನ ಮೌಲ್ಯಗಳಿಂದ ಮಾತ್ರ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣವು ಕೇವಲ ಶೈಕ್ಷಣಿಕ ಸಾಧನೆಗಳಿಗೆ ಸೀಮಿತವಲ್ಲ. ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ರೂಪಿಸಿಕೊಂಡ ವ್ಯಕ್ತಿತ್ವ, ಜೀವನ ಮೌಲ್ಯಗಳು ಹಾಗೂ ಸಾಮಾಜಿಕ ಬದ್ಧತೆಯೇ ಅವರ ನಿಜವಾದ ಗುರುತು.ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿವೆ. ಆಳ್ವಾಸ್ ನೀಡುವ ಪ್ರತಿಯೊಂದು ಪ್ರಮಾಣಪತ್ರವೂ ಸಂಸ್ಥೆಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳು ಅದರ ವಿದ್ಯಾರ್ಥಿಗಳ ಮೂಲಕ ಸಮಾಜದ ಮುಂದೆ ಪ್ರತಿಫಲಿಸುತ್ತವೆ. ಆ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿ ಮೇಲಿದೆ ಎಂದರು. ವಿದ್ಯಾರ್ಥಿಗಳು ತಾವು ಆಳ್ವಾಸ್‌ನ ಉತ್ಪನ್ನಗಳು ಎಂಬ ಹೆಮ್ಮೆಯನ್ನು ಹೊಂದಿರಬೇಕು. “ನೀವು ಎಲ್ಲೇ ಹೋದರೂ ಆಳ್ವಾಸ್‌ನ ರಾಯಭಾರಿಗಳಾಗಿದ್ದೀರಿ ಎಂಬುದನ್ನು ಮರೆಯಬೇಡಿ” ಎಂದು ಅವರು ಕಿವಿಮಾತು ಹೇಳಿದರು.

ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಆಳ್ವಾಸ್ ಆವರಣವು ಭಾರತದ ಏಕತೆಯಲ್ಲಿ ವೈವಿಧ್ಯತೆಯ ಪರಿಕಲ್ಪನೆಯನ್ನು ಜೀವಂತವಾಗಿ ಪ್ರತಿಬಿಂಬಿಸುತ್ತದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳ ನಡುವೆ ಬೆಳೆಯುವ ಪರಸ್ಪರ ಅರಿವು, ಸಹಬಾಳ್ವೆ ಮತ್ತು ಸಾಂಸ್ಕೃತಿಕ ವಿನಿಮಯವು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಇಂತಹ ಸಮೃದ್ಧ ಶೈಕ್ಷಣಿಕ ಹಾಗೂ ಸಾಮಾಜಿಕ ವಾತಾವರಣವು ವಿದ್ಯಾರ್ಥಿಗಳನ್ನು ಸಾರ್ವಜನಿಕ ಬದುಕಿನ ಸವಾಲುಗಳನ್ನು ಎದುರಿಸಲು, ಸಮಾಜದ ಅಗತ್ಯಗಳಿಗೆ ಸ್ಪಂದಿಸಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆ ನೀಡಲು ಸಜ್ಜುಗೊಳಿಸುತ್ತದೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಜ್ಞಾನವೊಂದೇ ಸಾಕಾಗುವುದಿಲ್ಲ. ವ್ಯಕ್ತಿತ್ವ ನಿರ್ಮಾಣ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ನಿರಂತರ ಕಲಿಕೆಯ ಮನೋಭಾವ ಯಶಸ್ಸಿನ ಪ್ರಮುಖ ಅಂಶಗಳಾಗಿವೆ ಎಂದರು.ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗಾಗಿ ಡಾ. ಕೇಕೆಸಾನಾ, ಅಂಜನಾ ಎಂ. ಹಾಗೂ ನವರೆನ್ ಸಿಂಗ್ ಅವರಿಗೆ ಪ್ರತಿಷ್ಠಿತ ಡಾ ಪಿ.ಬಿ. ಆಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಸಾಧನೆಗಾಗಿ ಡಾ. ಗೌತಮಿ ಬಿ. ಅವರಿಗೆ ಸೀತಾರಾಂ ಜಿಂದಾಲ್ ಚಿನ್ನದ ಪದಕ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿದ್ದರು. ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಅಧ್ಯಾಪಕರು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ಡಾ. ಕುರಿಯನ್ ಸ್ವಾಗತಿಸಿದರು.