Vande Mataram' Is Not Just a Song: A Proclamation of Freedom
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಆತ್ಮಘೋಷಣೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.ಪಟ್ಟಣದ ಮಂಥನ ವೇದಿಕೆ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. 150 ವರ್ಷಗಳ ಇತಿಹಾಸದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿಸಿದ ಅಮರ ಗೀತೆ ವಂದೇ ಮಾತರಂ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೆಲವು ಘೋಷಣೆಗಳು ಕೇವಲ ಪದಗಳಾಗಿ ಉಳಿಯದೆ, ಕೋಟ್ಯಂತರ ಜನರ ಹೃದಯದ ಭಾವನೆಗಳಾಗಿ ಬೆಳೆದಿವೆ. ಅಂತಹ ಅಮರ ಘೋಷಣೆಗಳಲ್ಲಿ ವಂದೇ ಮಾತರಂ ಅಗ್ರಸ್ಥಾನದಲ್ಲಿದೆ.
ಇದು ಕೇವಲ ಒಂದು ದೇಶಭಕ್ತಿ ಗೀತೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ, ಗೌರವ, ತ್ಯಾಗ ಮತ್ತು ರಾಷ್ಟ್ರೀಯ ಜಾಗೃತಿ ಸಂಕೇತ. ಬಂಗಾಳಿ ಸಾಹಿತ್ಯ ಲೋಕದ ಶ್ರೇಷ್ಠ ಕವಿ, ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ವಂದೇ ಮಾತರಂ ಗೀತೆ ರಚಿಸಿದ್ದು, ಭಾರತದ ನಿಸರ್ಗ ಸೌಂದರ್ಯ, ಸಮೃದ್ಧಿ, ಹಸಿರು ಹೊಲಗಳು, ನದಿಗಳು ಮತ್ತು ತಾಯ್ನಾಡಿನ ಮಹಿಮೆಯನ್ನು ಕವಿತೆಯ ಮೂಲಕ ಬಿಂಬಿಸಲಾಗಿದೆ.ಬ್ರಿಟಿಷರ ಆಳ್ವಿಕೆ ಕಾಲಘಟ್ಟದಲ್ಲಿ ರಾಷ್ಟ್ರಪ್ರೇಮ ಮತ್ತು ದೇಶದ ಸ್ವಾತಂತ್ರ್ಯದ ಆಶಯ ಜನರಲ್ಲಿ ಜಾಗೃತಗೊಳಿಸುವಲ್ಲಿ ಈ ಕಾದಂಬರಿ ಹಾಗೂ ಗೀತೆ ಮಹತ್ವದ ಪಾತ್ರ ವಹಿಸಿತು. 1905ರಲ್ಲಿ ಬ್ರಿಟಿಷರು ಬಂಗಾಳ ವಿಭಜನೆಗೆ ಮುಂದಾದಾಗ ದೇಶಾ ದ್ಯಂತ ಸ್ವದೇಶಿ ಚಳವಳಿ ಪ್ರಬಲವಾಗಿ ಬೆಳೆಯಿತು. ಈ ಸಂದರ್ಭದಲ್ಲಿ ವಂದೇ ಮಾತರಂ ಕೇವಲ ಗೀತೆಯಾಗಿ ಉಳಿಯದೆ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಘೋಷಣೆಯಾಯಿತು.
ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಬ್ರಿಟಿಷರ ವಿರುದ್ಧದ ಪ್ರತಿಭಟನೆಗಳಲ್ಲಿ ಸಾವಿರಾರು ಜನರು ವಂದೇ ಮಾತರಂ ಘೋಷಣೆ ಮೊಳಗಿಸಿದರು. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರಿಗೆ ಈ ಗೀತೆ ಹೊಸ ಉತ್ಸಾಹ ಮತ್ತು ಹೋರಾಟದ ಪ್ರೇರಣೆ ನೀಡಿತು ಎಂದರು.ರಾಷ್ಟ್ರಗೀತೆ ಜನಗಣಮನ ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂ ಎರಡೂ ಭಾರತೀಯರ ರಾಷ್ಟ್ರೀಯ ಬದುಕಿನಲ್ಲಿ ವಿಶಿಷ್ಟ ಸ್ಥಾನ ಹೊಂದಿವೆ. ಇಂದು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಆದರೆ ದೇಶದ ಮೇಲಿನ ಜವಾಬ್ದಾರಿ ಮುಗಿದಿಲ್ಲ. ದೇಶದ ಏಕತೆ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ರೈತರ ಕಲ್ಯಾಣ, ಸ್ವದೇಶಿ ಚಿಂತನೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕನೂ ಕೊಡುಗೆ ನೀಡಬೇಕಿದೆ ಎಂದರು.
ವಂದೇ ಮಾತರಂ ಎಂದರೆ ಕೇವಲ ಘೋಷಣೆ ಕೂಗುವುದಲ್ಲ. ನಾವು ಹುಟ್ಟಿದ ಮಣ್ಣನ್ನು ಪ್ರೀತಿಸುವುದು ಅದರ ಸಂಪನ್ಮೂಲ ಗಳನ್ನು ರಕ್ಷಿಸುವುದು, ದೇಶದ ಜನರ ಗೌರವ ಮತ್ತು ಸ್ವಾಭಿಮಾನ ಎತ್ತಿಹಿಡಿಯುವುದು ಕೂಡ ವಂದೇ ಮಾತರಂನ ನಿಜ ಆಶಯ ಎಂದರು.ಪ್ರಗತಿಪರ ಕೃಷಿಕ ಮಹೇಶ ಕುಮಾರ್ ಮಣಬೂರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತಿರುವುದರಿಂದ ೧೦೦ ವರ್ಷಗಳಿಂದ ಸಂಘ ತನ್ನ ಕಾರ್ಯ ತನ್ನ ಪಾಡಿಗೆ ಮಾಡುತ್ತಿದೆ. ಮುಂದೆಯೂ ಹಳ್ಳಿ ಹಳ್ಳಿಗಳಲ್ಲಿ ಸಂಘದ ಶಾಖೆ ಆದಾಗ ದೇಶ ಮತ್ತು ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನೂತನ ಸೂರ್ಯ, ಪ್ರಶಾಂತ್ ಲಿಂಬೆಕೊಂಡ, ಮಹೇಶ್ಚಂದ್ರ, ಸುನೀಲ್ ಕಲ್ಮಕಿ, ಬಿ.ವೆಂಕಟೇಶ್ ಗುರುಪ್ರಸಾದ್, ಉಮೇಶ್, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ ಮತ್ತಿತರರು ಹಾಜರಿದ್ದರು.೩೧ಬಿಹೆಚ್ಆರ್ ೧:ಬಾಳೆಹೊನ್ನೂರಿನ ಮಂಥನ ವೇದಿಕೆ ಆಯೋಜಿಸಿದ್ದ ವಂದೇ ಮಾತರಂ ಕುರಿತ ಮಂಥನ ಕಾರ್ಯಕ್ರಮದಲ್ಲಿ ವಿವಿಧ ರಾಷ್ಟ್ರೀಯ ಸಾಹಿತ್ಯದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ರಾಜೇಶ್ ಪದ್ಮಾರ್, ಮಹೇಶ್ ಕುಮಾರ್, ಪ್ರಶಾಂತ್ ಲಿಂಬೆಕೊಂಡ ಹಾಜರಿದ್ದರು.