ಭಕ್ತರಿಂದ ವರಮಹಾಲಕ್ಷ್ಮೀ ಹಬ್ಬ ಅದ್ಧೂರಿ ಆಚರಣೆ

| Published : Aug 17 2024, 12:48 AM IST

ಭಕ್ತರಿಂದ ವರಮಹಾಲಕ್ಷ್ಮೀ ಹಬ್ಬ ಅದ್ಧೂರಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಮುಂಜಾನೆಯೇ ಬಹುತೇಕ ಎಲ್ಲರ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ ಮೂಡಿದ್ದವು. ಪಟ್ಟಣದ ತುಂಬ ಬಹುತೇಕ ಮನೆಗಳಲ್ಲಿ ಹಬ್ಬದ ಸಂಭ್ರಮ- ಸಡಗರ ತುಂಬಿತ್ತು. ಬಾಗಿಲಿಗೆ ಹಾಗೂ ಮನೆಯ ಮುಂದಿನ ಕಂಬಗಳಿಗೆ ತಳಿರು- ತೋರಣ ಕಟ್ಟಿ ಹೂವುಗಳಿಂದ ಅಲಂಕರಿಸಿ ಸಿಂಗಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ಹಬ್ಬವನ್ನು ತಾಲೂಕಿನಾದ್ಯಂತ ಸಾವಿರಾರು ಭಕ್ತರು ಸಡಗರ- ಸಂಭ್ರಮದಿಂದ ಆಚರಿಸಿದರು.

ಶುಕ್ರವಾರ ಮುಂಜಾನೆಯೇ ಬಹುತೇಕ ಎಲ್ಲರ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ ಮೂಡಿದ್ದವು. ಪಟ್ಟಣದ ತುಂಬ ಬಹುತೇಕ ಮನೆಗಳಲ್ಲಿ ಹಬ್ಬದ ಸಂಭ್ರಮ- ಸಡಗರ ತುಂಬಿತ್ತು. ಬಾಗಿಲಿಗೆ ಹಾಗೂ ಮನೆಯ ಮುಂದಿನ ಕಂಬಗಳಿಗೆ ತಳಿರು- ತೋರಣ ಕಟ್ಟಿ ಹೂವುಗಳಿಂದ ಅಲಂಕರಿಸಿ ಸಿಂಗಾರ ಮಾಡಲಾಗಿತ್ತು.

ಮುತ್ತೈದೆಯರು ಮನೆಗಳಲ್ಲಿ ವರಮಹಾಲಕ್ಷ್ಮೀಗೆ ಬೆಳ್ಳಿ ಚೆಂಬು ಅಥವಾ ಕಳಸದ ರೂಪದಲ್ಲಿ ಇಟ್ಟು ಅದಕ್ಕೆ ನೀರನ್ನು ತುಂಬಿಸಿ ಸುತ್ತಲೂ ವಿಳ್ಳೆಯದೆಲೆ ಅಥವಾ ಮಾವಿನ ಎಲೆಗಳ ನೆಲೆಸಿ ಅದರೊಳಗೆ ಖರ್ಜೂರ ಹಾಗೂ ದ್ರಾಕ್ಷಿ ಹಾಕಿ, ತಟ್ಟೆ ಅಥವಾ ಬಾಳೆ ಎಲೆ ಮೇಲೆ ಕಳಸವನ್ನಿಟ್ಟು ಅಕ್ಕಿಯನ್ನು ಸುರಿದು ಅದರ ಮೇಲೆ ತೆಂಗಿನಕಾಯಿ ಇಟ್ಟು, ಶ್ವೇತ ವರ್ಣದ ಅಥವಾ ಕೆಂಪು ಬಣ್ಣದ ಸೀರೆಯನ್ನು ಉಡಿಸಿ ಚಿನ್ನದ ಬೆಳ್ಳಿಯ ಒಡವೆಗಳಿಂದ ವಿವಿಧ ರೀತಿಯ ಹೂಗಳಿಂದ ಸಿಂಗರಿಸಿದ್ದರು.

ಕಮಲದ ಹೂವು ವರಮಹಾಲಕ್ಷ್ಮೀಗೆ ಬಹಳ ಇಷ್ಟವೆಂದು ಬಿಲ್ವಪತ್ರೆಯನ್ನು ಧರಿಸಿ, ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಹಾಗೂ ನಾನಾ ರೀತಿಯ ಹಣ್ಣುಗಳನ್ನು ತಾಯಿಯ ಮುಂದೆ ಇರಿಸಿ ತಮ್ಮ ಶಕ್ತಿಗೆ ಅನುಸಾರವಾಗಿ ನೋಟು ಮತ್ತು ಚಿಲ್ಲರೆ ಹಣವನ್ನು ಇಟ್ಟು ಬೇಡಿದ ವರಗಳನ್ನು ಕರುಣಿಸು, ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸು ತಾಯಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು.

ವರಮಹಾಲಕ್ಷ್ಮೀಯನ್ನು ಪೂಜಿಸಿದ ನಂತರ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಕರೆದು ಅರಿಶಿನ- ಕುಂಕುಮ, ಹೂವು, ಬಳೆ, ರವಿಕೆ ಕಣ, ಸಿಹಿ ತಿಂಡಿಗಳು ಮುಂತಾದವುಗಳನ್ನು ನೀಡಿದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸ ಪಡುತ್ತಿದ್ದರು.

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಮುಂತಾದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಭಕ್ತರು ಹಣವನ್ನು ಲೆಕ್ಕಿಸದೇ ತಮ್ಮ ಇಷ್ಟಾನುಸಾರ ತಾಯಿಗೆ ಪದಾರ್ಥಗಳನ್ನು ಖರೀದಿಸಿ ಪೂಜೆ ಸಲ್ಲಿಸಿದರು.