ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮನೆಗಳಲ್ಲಿ ಸಮೃದ್ಧಿ, ಆರೋಗ್ಯ ಮತ್ತು ಕುಟುಂಬದ ಯೋಗ ಕ್ಷೇಮಕ್ಕಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮನೆಗಳಲ್ಲಿ ಸಮೃದ್ಧಿ, ಆರೋಗ್ಯ ಮತ್ತು ಕುಟುಂಬದ ಯೋಗ ಕ್ಷೇಮಕ್ಕಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.

ಮಹಿಳೆಯರು ಕಲಶಗಳನ್ನು ಅಕ್ಕಿ, ಮಾವಿನ ಎಲೆಗಳು, ತೆಂಗಿನಕಾಯಿ, ಹೂವುಗಳು, ಆಭರಣಗಳು ಮತ್ತು ನಾಣ್ಯ ಮಾಲೆಗಳಿಂದ ಅಲಂಕರಿಸಿದರು. ಮೊದಲು ಗಣಪತಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅಲಂಕರಿಸಿದ ವಿಗ್ರಹದ ರೂಪದ ದೇವಿಯನ್ನು ಪೂಜಿಸಲಾಯಿತು. ಸಾಂಪ್ರದಾಯಿಕ ಖಾದ್ಯಗಳಾದ ಒಬ್ಬಟ್ಟು, ಹುಲಿಯಣ್ಣ ಮತ್ತು ಪಾಯಸ ಈ ಸಂದರ್ಭಕ್ಕೆ ಮೆರುಗು ನೀಡಿತು. ಹಬ್ಬ ಆಚರಣೆಯಲ್ಲಿ ತೊಡಗಿದ ಸಹಸ್ರಾರು ಸಂಖ್ಯೆಯ ಭಕ್ತರು ಸಿಹಿತಿಂಡಿಗಳು, ಹೂವುಗಳು ಮತ್ತು ಪ್ರಸಾದವನ್ನು ಹಂಚಿದರು.ದಿನದ ಗೊಂದಲ !: ಈ ವರ್ಷದ ವರಮಹಾಲಕ್ಷ್ಮಿ ಪೂಜೆಯನ್ನು ಆ.೨೧ ರಂದು ಮಾಡಬೇಕೇ ಅಥವಾ ಆ.೨೮ರಂದು ಮಾಡಬೇಕೇ ಎನ್ನುವ ದಿನಾಂಕದ ಬಗ್ಗೆ ಸಾಕಷ್ಟು ಗೊಂದಲವಿದ್ದ ಕಾರಣ ಜಿಲ್ಲೆಯ ದೇವಸ್ಥಾನಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಆಚರಣೆ ನಡೆದಿಲ್ಲ. ದೇವಸ್ಥಾನಗಳಲ್ಲಿ ಆ.೨೮ರಂದು ಪೂಜೆ ನಡೆಯಲಿದೆ. ಆದರೆ ವರಮಹಾಲಕ್ಷ್ಮಿ ಪೂಜೆ ಆಚರಿಸುವ ಕೆಲವು ಮನೆಗಳಲ್ಲಿ ಶುಕ್ರವಾರ ಪೂಜೆ ನಡೆದಿದೆ.