ಸಾರಾಂಶ
ಬಳ್ಳಾರಿ: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ "ಶ್ರೀವರಮಹಾಲಕ್ಷ್ಮಿಪೂಜೆ " ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಗರದಲ್ಲಿ ಹಬ್ಬದ ಸಡಗರ ಜೋರಾಗಿತ್ತು. ಗುರುವಾರ ಸಂಜೆಯಿಂದಲೇ ಹೂವು, ಹಣ್ಣು, ಬಾಳೆದಿಂಡು, ಕೊಬ್ಬರಿ, ಹಸಿರುಬಳೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಸಿಕೊಂಡಿದ್ದರು. ಬೆಲೆ ಏರಿಕೆಯ ನಡುವೆಯೂ ಹೂವು, ಹಣ್ಣುಗಳನ್ನು ಖರೀದಿಸುವ ದೃಶ್ಯಗಳು ನಗರದ ಬೆಂಗಳೂರು ರಸ್ತೆ, ಗ್ರಹಂ ರಸ್ತೆ ಹಾಗೂ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಕಂಡು ಬಂತು.ಹಬ್ಬದ ಸಂಭ್ರಮ ಮೇಳೈಸಿತು:
ಶುಕ್ರವಾರ ಬೆಳಿಗ್ಗೆಯಿಂದಲೇ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಮೇಳೈಸಿತು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ಮಹಿಳೆಯರು ಅಭ್ಯಂಗ ಸ್ನಾನ ಮಾಡಿಕೊಂಡು ಹೊಸ ಬಟ್ಟೆ ಧರಿಸಿ ಪೂಜಾ ಕೈಂಕರ್ಯ ಆರಂಭಿಸಿದರು. ಲಕ್ಷ್ಮಿ ಕಳಸವನ್ನು ಪ್ರತಿಷ್ಠಾಪಿಸಿ, ಹಸಿರು ಸೀರೆ ತೊಡಿಸಿ, ಅದಕ್ಕೆ ಬೆಳ್ಳಿಯ ಲಕ್ಷ್ಮಿ ಮೂರ್ತಿಯನ್ನು ಇಟ್ಟು ವಿವಿಧ ಹೂವುಗಳಿಂದ ಸಿಂಗರಿಸಿದರು.ಬಳಿಕ ಕುಟುಂಬ ಸದಸ್ಯರ ಜೊತೆಗೂಡಿ ಸಂಪ್ರದಾಯದಂತೆ ಲಕ್ಷ್ಮಿಪೂಜೆ ಕೈಗೊಂಡರು. ಹೋಳಿಗೆ ಮಾಡಿ ದೇವಿಗೆ ನೈವೇದ್ಯ ಮಾಡಿದರು. ಬಳಿಕ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ, ಉಡಿ ತುಂಬಿದರು. ತೆಂಗಿನಕಾಯಿ, ಬಾಳೆಹಣ್ಣು, ಎಲೆ,ಅಡಿಕೆ, ಹಸಿರುಬಳೆ, ಹೂವು ನೀಡಿ ಆರತಿ ಮಾಡಿ ಮಂಗಳವಾಗಲಿ ಎಂದು ಹಾರೈಸಿದರು. ಮುತ್ತೈದೆಯನ್ನು ಮನೆಗೆ ಆಹ್ವಾನಿಸುವ ದೃಶ್ಯಗಳು ಸಂಜೆವರೆಗೆ ಮುಂದುವರಿದಿದ್ದವು.
ದೇವಸ್ಥಾನದಲ್ಲಿ ವಿಶೇಷ ಪೂಜೆ:ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಿ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆಗಳು ಜರುಗಿದವು. ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿನಿಂತು ದರ್ಶನ ಪಡೆದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂತು.
ಈ ಹಿಂದೆ ಕೆಲವೇ ಮನೆಗಳಲ್ಲಷ್ಟೇ ಕಂಡು ಬರುತ್ತಿದ್ದ ವರಮಹಾಲಕ್ಷ್ಮಿ ಪೂಜೆ ಕಳೆದ ಒಂದು ದಶಕದಿಂದ ಜೋರಾಗಿದ್ದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹಬ್ಬದ ಸಡಗರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಮಹಾಲಕ್ಷ್ಮಿಹಬ್ಬದ ದಿನದಂದು ಪೂಜೆ ಸಲ್ಲಿಸಿದವರಿಗೆ ಅಷ್ಟಲಕ್ಷ್ಮಿಯರ ಸಿದ್ಧಿ ದೊರೆತು, ಕುಟುಂಬದಲ್ಲಿ ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ ಎಂಬ ಭಾವನೆಯಿದೆ.