ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ವರ್ಧಂತಿ ದಿನವಾದ ಮಂಗಳವಾರ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರುವ ಜೊತೆಗೆ ಐತಿಹಾಸಿಕ ಶ್ರೀಕೃಷ್ಣರಾಜಮುಡಿ ಉತ್ಸವಕ್ಕೆ ಚಾಲನೆ ದೊರೆಯಿತು.60 ಸಂವತ್ಸರಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನ್ನು ಆಳಿ, ಇತಿಹಾಸದ ಅವಿಭಾಜ್ಯ ಅಂಗವಾಗಿ, ಅಪ್ರತಿಮ ಕಲಾಪೋಷಕರು ಹಾಗೂ ಸಾಹಿತ್ಯ ರಚನೆಕಾರರೂ ಆದ ಶ್ರೀಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಅವರ 230ನೇ ವಧಂತಿಯ ಅಂಗವಾಗಿ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ, ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮಿಯದುಗಿರಿ ನಾಯಕಿ ಅಮ್ಮನವರಿಗೆ ಶಾಸ್ತ್ರೋಕ್ತವಾಗಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಹಾಭಿಷೇಕ ನೆರವೇರಿಸಿ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಪಾತಾಣಾಂಕಣದಲ್ಲಿರುವ ಮುಮ್ಮುಡಿ ಕೃಷ್ಣರಾಜ ಒಡೆಯರ್ ಸಮೇತ ರಾಣಿಯರ ಭಕ್ತವಿಗ್ರಹಕ್ಕೆ ಸ್ವಾಮಿ ಪ್ರಸಾದ ಪಾದುಕೆ ಮತ್ತು ಮಾಲೆಯ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಜೆ ದೇವಸೇನ ವಿಶ್ವಕ್ಸೇನರ ಉತ್ಸವ ನಂತರ ಅಮ್ಮನವರ ಸನ್ನಿಧಿ ಮುಂಭಾಗ ಚೆಲುವನಾಯಣಸ್ವಾಮಿ ಮತ್ತು ಕಲ್ಯಾಣನಾಯಕಿಗೆ ಸಮನ್ಮಾಲೆ ಲಾಜಹೋಮ, ಮುಂತಾದ ವಿದಿವಿಧಾನ ನೆರವೇರಿಸಿ ಕಲ್ಯಾಣೋತ್ಸವ ನೆರವೇರಿಸಲಾಯಿತು.ವಜ್ರಖಚಿತ ಕಿರೀಟ ಸಮರ್ಪಣೆ:
ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ತಮ್ಮ ಕುಲದೈವ ಮೇಲುಕೋಟೆ ಚೆಲುವನಾರಾಯಣನಿಗೆ ವಜ್ರಖಚಿತ ಕೃಷ್ಣರಾಜ ಮುಡಿ ಕಿರೀಟ ಅರ್ಪಿಸಿ ಆರಂಭಿಸಿದ ಆಷಾಢ ಬ್ರಹ್ಮೋತ್ಸವ ಶತಮಾನಗಳ ನಂತರವೂ ಮುಂದುವರೆದಿದ್ದು ಐತಿಹಾಸಿಕ ಪರಂಪರೆಯ ಕೊಂಡಿಯಾಗಿ ನೆರವೇರುತ್ತಾ ಬಂದಿದೆ.ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಹೋತ್ಸವದ ನಾಲ್ಕನೇ ದಿನವಾದ ಜುಲೈ 26 ರಂದು ರಾತ್ರಿ ಕೃಷ್ಣರಾಜಮುಡಿ ಉತ್ಸವ ವೈಭವದಿಂದ ನೆರವೇರಲಿದೆ.
ಗರುಡ ದ್ವಜಾರೋಹಣ:ಆಷಾಢ ಮಾಸದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಮೊದಲತಿರುನಾಳ್ ಅಂಗವಾಗಿ ಮಂಗಳವಾರ ಬೆಳಗ್ಗೆ ಗರುಡ ದ್ವಜಾರೋಹಣ ನೆರವೇರಿತು. ಗರುಡದೇವನ ಪೂಜೆ ಕೈಗೊಂಡು ಗರುಡಸಾಮದ ಪಠಣದ ನಂತರ ಬ್ರಹ್ಮೋತ್ಸವಕ್ಕೆ ದೇವಾನು ದೇವತೆಗಳನ್ನು ಆಹ್ವಾನಿಸುವಂತೆ ಪ್ರಾರ್ಥಿಸಿ ಚಿನ್ನದ ದ್ವಜಸ್ಥಂಭದ ಮೇಲೆ ಗರುಡ ದ್ವಜಾರೋಹಣ ನೆರವೇರಿಸಲಾಯಿತು.