ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವರಹನಾಥ ಕಲ್ಲಹಳ್ಳಿಯಲ್ಲಿ ನೆಲೆಸಿರುವ ಶ್ರೀಭೂವರಹನಾಥಸ್ವಾಮಿಯ 17ಅಡಿ ಎತ್ತರದ ಶಿಲಾಮೂರ್ತಿಗೆ ರೇವತಿ ನಕ್ಷತ್ರದ ಶುಭ ದಿನವಾದ ಮಂಗಳವಾರ ವಿವಿಧ ದ್ರವ್ಯಗಳಿಂದ ಅಭಿಷೇಕ, ಪುಷ್ಷಾಭಿಷೇಕ ನೆರವೇರಿಸಿ, ಪಟ್ಟಾಭಿಷೇಕದೊಂದಿಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಯಿತು.

ಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನ ಹಾಲು, ಅರಿಶಿನ ಚಂದನ ಹಸುವಿನ ತುಪ್ಪ ಜೇನುತುಪ್ಪ ಸುಗಂಧ ದ್ರವ್ಯಗಳು ಹಾಗೂ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಪವಿತ್ರ ಪತ್ರೆಗಳು ದವನ, ಕಮಲ ಹಾಗೂ ಸಂಪಿಗೆ, ತುಳಸಿಯಿಂದ ಪುಷ್ಪಾಭಿಷೇಕ ಮಾಡಿ ಪಟ್ಟಾಭಿಷೇಕ ನೆರವೇರಿಸಿ, ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಲೋಕ ಕಲ್ಯಾಣಾರ್ಥವಾಗಿ ವಿಶೇಷೇ ಪ್ರಾರ್ಥನೆ ಸಲ್ಲಿಸಲಾಯಿತು.

ಆನಂತರ ಭುದೇವಿ ಸಮೇತನಾದ ಭೂವರಾಹನಾಥನ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಭಾಗವಹಿಸಿದ್ದ ಭಕ್ತಾದಿಗಳಿಗೆ ಸಿಹಿ ಪೊಂಗಲ್, ಬಿಸಿಬೇಳೆ ಬಾತ್, ಮೊಸರನ್ನ ಹಾಗೂ ಸಜ್ಜಪ್ಪ ಪ್ರಸಾದ ವಿತರಿಸಲಾಯಿತು.

ದೇಗುಲದ ಟ್ರಸ್ಟಿ ಡಾ.ಶ್ರೀನಿವಾಸ ರಾಘವನ್ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ಸಾಗಿದರೆ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯುವ ಜೊತೆಗೆ ಕೈಹಿಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಲು ಕೂಡ ಸಾಧ್ಯವಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.


ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಅಗತ್ಯ: ಡಾ.ಸೌಮ್ಯ ರಾಜೇಶ್

ಕೆ.ಎಂ.ದೊಡ್ಡಿ:ಪ್ರತಿಯೊಬ್ಬರೂ ಎರಡು ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರೋಟರಿ ಸೆಂಟ್ರಲ್ ಕಾರ್ಯದರ್ಶಿ ಡಾ.ಸೌಮ್ಯ ರಾಜೇಶ್ ಸಲಹೆ ನೀಡಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಟರಿ ಭಾರತೀನಗರ ಸೆಂಟ್ರಲ್‌ ವತಿಯಿಂದ ಪ್ರತಿ ತಿಂಗಳ ಮೊದಲ ಮಂಗಳವಾರ ಉಚಿತ ಕಣ್ಣಿನ ತಪಸಾಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಒತ್ತಡದ ಜೀವನ, ಬದಲಾದ ಆಹಾರ ಕ್ರಮಗಳಿಂದಾಗಿ ಮನುಷ್ಯರಿಗೆ ನಿತ್ಯ ಆರೋಗ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ರೋಟರಿ ಸಂಸ್ಥೆ ಸೇರಿದಂತೆ ಸಮಾಜದಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ನಡೆಸುವ ಇಂತಹ ಉಚಿತ ಆರೋಗ್ಯ ಶಿಬಿರಗಳಿಂದ ಬಡವರು, ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದರು.

ಕಣ್ಣು‌ ಮಾನವ ದೇಹದ ಅತೀ ಸೂಕ್ಷ್ಮ ಆಂಗ. ಆದ್ದರಿಂದ ಪ್ರತಿಯೊಬ್ಬರು ದೇಹದ ಆರೋಗ್ಯದ ಜೊತೆಗೆ ಕಣ್ಣಿನ ಆರೋಗ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದರು.ಇದೇ ವೇಳೆ ಶಿಬಿರದಲ್ಲಿ 100 ಜನರನ್ನು ತಪಾಸಣೆ ಮಾಡಿ ಅದರಲ್ಲಿ 50 ಜನರನ್ನು 3 ದಿನ ಕಣ್ಣಿನ ಶಸ್ತ್ರ ಚಿಕೆತ್ಸೆಗಾಗಿ ಬೆಂಗಳೂರಿನ ಶಂಕರ್ ಕಣ್ಣಿನ‌ ಆಸ್ಪತ್ರೆಗೆ ಕಳುಹಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಶಶಿಕುಮಾರ್, ಶಿವರಾಮೇಗೌಡ, ಕುಮಾರ್ ರಾಜು, ಮರಿಚನ್ನೇಗೌಡ, ರಮೇಶ್, ಶಿವರತ್ನಮ್ಮ, ಶಿವಮ್ಮ, ಕೃಷ್ಣ,ಕೆಂಪೇಗೌಡ, ಮಹೇಶ್, ಬಸವರಾಜೇಗೌಡ ಇದ್ದರು.