ಮಾರ್ಚ್ 21ರ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ

| Published : Mar 22 2025, 02:03 AM IST

ಮಾರ್ಚ್ 21ರ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಎಂಇಎಸ್ ದೌರ್ಜನ್ಯ ಖಂಡಿಸಿ ಕನ್ನಡ ಒಕ್ಕೂಟ ಮಾರ್ಚ್ 21ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮದ್ದೂರು ಪಟ್ಟಣದ ವರ್ತಕರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಮತ್ತು ಬೇಕರಿ ಮಾಲೀಕರು ಒಂದು ದಿನದ ಮಟ್ಟಿಗೆ ತಮ್ಮ ವ್ಯಾಪಾರ ಮತ್ತು ವಹಿವಾಟುಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಎಂಇಎಸ್ ದೌರ್ಜನ್ಯ ಖಂಡಿಸಿ ಕನ್ನಡ ಒಕ್ಕೂಟ ಮಾರ್ಚ್ 21ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್ ನೇತೃತ್ವದಲ್ಲಿ ಸಭೆ ನಡೆಸಿದ ಸಂಘಟನೆಗಳ ಮುಖಂಡರು ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲು ಸರ್ವಾನುಮತದ ತೀರ್ಮಾನ ಕೈಗೊಂಡರು.

ಮದ್ದೂರು ಪಟ್ಟಣದ ವರ್ತಕರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಮತ್ತು ಬೇಕರಿ ಮಾಲೀಕರು ಒಂದು ದಿನದ ಮಟ್ಟಿಗೆ ತಮ್ಮ ವ್ಯಾಪಾರ ಮತ್ತು ವಹಿವಾಟುಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಮರಾಠ ಪುಂಡರು ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದೌರ್ಜನ ನಡೆಸುತ್ತಿದ್ದಾರೆ. ಸರ್ಕಾರ ಎಂಇಎಸ್ ಸಂಘಟನೆ ನಿಷೇಧಿಸಬೇಕು. ರಾಜ್ಯದಲ್ಲಿ ಬಸ್ ಕಂಡಕ್ಟರ್‌ಗಳ ಮೇಲೆ ಮರಾಠಿಗರು ನಡೆಸಿರುವ ದಾಳಿ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮುಖಂಡರಾದ ನ.ಲಿ.ಕೃಷ್ಣ, ದೇಶಹಳ್ಳಿ ಬೋರಣ್ಣ, ಮಾ.ನ.ಪ್ರಸನ್ನ ಕುಮಾರ್, ಸತೀಶ, ರಜನಿ ರಾಜ್, ಜಯಂತಿಲಾಲ್ ಪಟೇಲ್ ಮತ್ತಿತರರು ಇದ್ದರು.

ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ

ಕನ್ನಡಪ್ರಭ ವಾರ್ತೆ ಮಂಡ್ಯ

ಮರಾಠಿಗರ ಪುಂಡಾಟಿಕೆ, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಶನಿವಾರ (ಮಾ.೨೨) ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ.

ಬಂದ್‌ಗೆ ಆಟೋ ಚಾಳಕರು, ವರ್ತಕರು, ರೈತ, ಕಾರ್ಮಿಕ ಸಂಘಟನೆಗಳು, ಬೇಕರಿ ಮಾಲೀಕರ ಸಂಘ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದು, ಅರ್ಧದಿನ ಭಾಗಶಃ ಬಂದ್ ಆಗಬಹುದೆಂದು ಹೇಳಲಾಗುತ್ತಿದೆ. ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಕ್ಕೆ ಕನ್ನಡಪರ ಸಂಘಟನೆಗಳು ಯೋಜನೆ ರೂಪಿಸಿಕೊಂಡಿವೆ ಎಂದು ಗೊತ್ತಾಗಿದೆ.