ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಸಮಾಜದಲ್ಲಾಗಿರುವ ಬದಲಾವಣೆ, ತಂತ್ರಜ್ಞಾನದ ಬೆಳವಣಿಗೆ ಪರಿಣಾಮ ಹೊಸದಾಗಿ ಜಾರಿಗೆ ಬಂದಿರುವ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲು ನ್ಯಾಯ ವಿತರಣಾ ವ್ಯವಸ್ಥೆಯ ಭಾಗವಾಗಿರುವ ನ್ಯಾಯಾಧೀಶರು, ನ್ಯಾಯವಾದಿಗಳು, ಪೊಲೀಸರು, ಕಾನೂನು ಪ್ರಾಧ್ಯಾಪಕರು ಹಾಗೂ ಕಾನೂನು ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಪಿ.ಎಸ್. ದೇಸಾಯಿ ಹೇಳಿದರು.ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ‘ಹೊಸ ಪ್ರಮುಖ ಕ್ರಿಮಿನಲ್ ಕಾಯ್ದೆಗಳಲ್ಲಿನ ಬದಲಾವಣೆಗಳು ಹಾಗೂ ರೂಪಾಂತರಗಳು ಮತ್ತು ಭಾರತದಲ್ಲಿನ ಅಪರಾಧ ನ್ಯಾಯಾ ಆಡಳಿತ ವ್ಯವಸ್ಥೆಯ ಮೇಲೆ ಅವುಗಳ ಯೋಜಿತ ಪರಿಣಾಮ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಯ್ದೆಗಳು ಶಿಕ್ಷೆ ಆಧಾರಿತ ಕಾನೂನುಗಳಾಗಿದ್ದವು. ಆದರೆ ಹೊಸ ಕಾನೂನುಗಳು ನ್ಯಾಯ ಆಧಾರಿತ ಕಾನೂನುಗಳಾಗಿವೆ. ಆಲ್ಲದೇ ಸಮುದಾಯ ಸೇವೆಗಳು ಎಂಬ ಹೊಸ ಶಿಕ್ಷಾ ವಿಧಾನವನ್ನು ಸಹ ಅಳವಡಿಸಲಾಗಿದೆ ಎಂದವರು ಹೇಳಿದರು.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ದ್ವಾರಕನಾಥ ಬಾಬು ಮಾತನಾಡಿ, ಕಾನೂನು ಕಾಲೇಜುಗಳ ಕಾನೂನು ಸೇವೆಗಳ ಕ್ಲಿನಿಕ್ ವತಿಯಿಂದ ವಿದ್ಯಾರ್ಥಿಗಳು ಜಾಗೃತಿ ಕಾಯಕ್ರಮವನ್ನು ಎಲ್ಲ ಕಡೆಗಳಲ್ಲಿಯೂ ಹಮ್ಮಿಕೊಳ್ಳುವ ಮೂಲಕ ಸಾಮಾನ್ಯ ಜನರಲ್ಲಿ ಹೊಸ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಪ್ರೊ. ಸಿ.ಎಸ್. ಪಾಟೀಲ್, ಮಣಿಪಾಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ್ ಟಿ.ವಿ. ಆಗಮಿಸಿದ್ದರು. ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ಸ್ವಾಗತಿಸಿದರು. ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲ ಕುಮಾರಿ ಕೆ, ಪ್ರಾಂಶುಪಾಲ ಪ್ರೊ.ರಘನಾಥ್ ಕೆ.ಎಸ್., ಪೋಷಕ -ರಕ್ಷಕ ಸಂಘದ ಅಧ್ಯಕ್ಷೆ ವಿನುತ ಕಿರಣ್ ಹರೀಶ್ ಹಾಜರಿದ್ದರು. ಡಾ.ಜಯಮೋಲ್ ಪಿ.ಎಸ್ ಕಾಯ೯ಕ್ರಮದ ಸಂಯೋಜಕರಾಗಿದ್ದರು.ಈ ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ಕಾನೂನು ಕಾಲೇಜುಗಳ ೩೮ ಅಧ್ಯಾಪಕರು, ವಿದ್ಯಾಥಿ೯ಗಳು ತಮ್ಮ ಸಂಶೋಧನ ಪ್ರಬಂಧವನ್ನು ಮಂಡಿಸಿದರು. ಸಹಾಯಕ ಪ್ರಾಧ್ಯಾಪಕ ಅಮೋಘ ಗಾಡ್ಕರ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.