ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮೀಣ ಭಾಗದ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ಅತ್ಯಾಧುನಿಕ ಬೋಧನಾ ಉಪಕರಣಗಳ ಮೂಲಕ ಶಿಕ್ಷಣ ನೀಡುವ ಕನಸಿನೊಂದಿಗೆ ಇಟ್ಟಂಗಿಹಾಳ- ಅರಕೇರಿ ಸಮೀಪ ಶ್ರೀ ಅಸೋಸಿಯೇಷನ್ ಅಡಿಯಲ್ಲಿ ವೇದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶುಕ್ರವಾರ ಲೋಕಾರ್ಪಣೆಗೊಂಡಿತು. ವಿಶೇಷ ಪೂಜೆಯ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ದೊರಕಿತು.ಗ್ರಾಮೀಣ ಭಾಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬೋಧನೆ, ಅತ್ಯಾಧುನಿಕ ಎಲ್‌ಇಡಿ ಪರದೆ ಮೊದಲಾದ ಸೌಕರ್ಯವುಳ್ಳ ಸ್ಮಾರ್ಟ್ ಕ್ಲಾಸ್, ವಿಶಾಲವಾದ ಕಟ್ಟಡ ನಗರದ ಜನಸಂದಣಿಯಿಂದ ಮುಕ್ತವಾದ ನೈಸರ್ಗಿಕ ವಾತಾವರಣ, ಕಾಂಪೊಜಿಟ್ ಲ್ಯಾಬ್, ಡಿಜಿಟಲ್ ವರ್ಗ ಕೋಣೆಗಳು, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ವಿಶಾಲವಾದ ವಿಶೇಷ ಆಟದ ಮೈದಾನ, ಸುಸಜ್ಜಿತ ಸಾರಿಗೆ ವ್ಯವಸ್ಥೆ, ಜಿಮ್, ಡೇ ಬೋರ್ಡಿಂಗ್ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಎಲ್ಲಾ ಸೌಕರ್ಯಗಳ ಹೊಂದಿದ ವೇದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶೈಕ್ಷಣಿಕ ವಲಯದಲ್ಲಿ ಹೊಸ ಸಾಧನೆಯ ಮುನ್ನುಡಿ ಬರೆಯಲು ಅಣಿಯಾಯಿತು.ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ಯರನಾಳ ವಿರಕ್ತಮಠದ ಗುರು ಸಂಗನಬಸವ ಮಹಾಸ್ವಾಮೀಜಿ ಆಶೀವರ್ಚನ ನೀಡಿ, ಶಿಕ್ಷಣ ಬಾಳಿನ ಬೆಳಕು, ಶಿಕ್ಷಣದಿಂದಲೇ ಮನುಷ್ಯನ ಭವಿಷ್ಯ ಉಜ್ವಲವಾಗಲಿದೆ. ಈ ಹಿನ್ನೆಲೆಯಲ್ಲಿಯೇ ಬಂಥನಾಳ ಶಿವಯೋಗಿಗಳು ಬಿಎಲ್‌ಡಿಇ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಗಂಗೆಯನ್ನು ವಿಜಯಪುರಕ್ಕೆ ಹರಿಸುವಂತೆ ಮಾಡಿದರು. ಫಲವಾಗಿ ಅನೇಕರು ಶಿಕ್ಷಣವಂತರಾಗಿ ಮುನ್ನಡೆಯುವಂತಾಯಿತು. ಗ್ರಾಮೀಣ ಭಾಗದ ಮಕ್ಕಳಿಗೂ ಸಹ ಅಂತಾರಾಷ್ಟ್ರೀಯ ಮಟ್ಟದ ಬೋಧನೆಯ ವಿಧಾನಗಳೊಂದಿಗೆ ಜ್ಞಾನದ ರಸದೌತಣ ನೀಡುವ ನಿಟ್ಟಿನಲ್ಲಿ ವೇದ ಅಕಾಡೆಮಿ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸಿರುವುದು ಸಂತೋಷ ತಂದಿದೆ. ಈ ಸಂಸ್ಥೆ ಮುಂದೆಯೂ ಶೈಕ್ಷಣಿಕವಾಗಿ ಪ್ರತಿಭೆಗಳನ್ನು ನಾಡಿಗೆ ಧಾರೆ ಎರೆಯಲಿ ಎಂದು ಶುಭ ಹಾರೈಸಿದರು.ಈ ವೇಳೆ ಎಸ್.ಎಸ್.ಎಲ್.ಸಿ ವಾರ್ಷೀಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ, ಮನಗೂಳಿ ಮಠದ ಸಂಗನಬಸವ ಶಿವಾಚಾರ್ಯರು, ಹಿರಿಯ ಕೆಎಎಸ್ ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ಎನ್.ಜಿ.ಯರನಾಳ, ಕೋಶಾಧ್ಯಕ್ಷೆ ಶಿವಲೀಲಾ ಕೆಲೂರ, ನಿರ್ದೇಶಕಿ ಡಾ.ಭುವನೇಶ್ವರಿ ಮೇಲಿನಮಠ, ವಿಶ್ರಾಂತ ಪೊಲೀಸ್ ಉಪಾಧೀಕ್ಷಕ ಬಸವರಾಜ ಚೌಕಿಮಠ, ಚಿಂತಕ ಡಾ.ಮಹಾಂತೇಶ ಬಿರಾದಾರ, ಉದ್ಯಮಿ ಅರುಣ ಮಾಚಪ್ಪನವರ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶಿವಾನಂದ ಭುಯ್ಯಾರ, ಸಿಪಿಐ ಜಾನರ, ಡಾ.ಬಾಬು ರಾಜೇಂದ್ರ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಹಿರಿಯ ಪತ್ರಕರ್ತ ಪ್ರಭು ಮಲ್ಲಿಕಾರ್ಜುನಮಠ, ರಾಜು ಮುತ್ತಿನಪೆಂಡಿಮಠ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
--------ಬಾಕ್ಸ್
ಮೂರೇ ವರ್ಷದಲ್ಲಿ ಸಾಧನೆಯ ಶಿಖರವೇದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬಹುದಿನಗಳ ಕನಸಾಗಿತ್ತು. ಇಂದು ಅನೇಕರ ಮಾರ್ಗದರ್ಶನ, ಗುರುಗಳ ಶುಭಾಶೀರ್ವಾದದಿಂದ ನನಸಾಗಿದೆ ಎಂದು ಸಂತಸ ಹಂಚಿಕೊಂಡರು. 2022ರಲ್ಲಿ ಪ್ರಾರಂಭವಾದ ಶ್ರೀವೇದ ಅಕಾಡೆಮಿ ಕೇವಲ ಮೂರು ವರ್ಷಗಳಲ್ಲಿ 1800 ವಿದ್ಯಾರ್ಥಿಗಳು ಸುಮಾರು 100 ಜನ ಬೋಧಕ ಸಿಬ್ಬಂದಿಯನ್ನು ಹೊಂದಿದೆ ಎಂದು ಸಾಧನೆಯನ್ನು ವಿವರಿಸಿದರು. ಜೂನ್ ತಿಂಗಳಲ್ಲಿ ವೇದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ತರಗತಿಗಳು ಆರಂಭವಾಗಲಿದ್ದು, ಪ್ರವೇಶ ಪ್ರಕ್ರಿಯೆ ಆರಂಭವಾಗಿರುವುದನ್ನು ಡಾ.ಶಿವಾನಂದ ಕೆಲೂರ ತಿಳಿಸಿದರು.