ಸಾರಾಂಶ
ಕುಂದೂರು ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಭಕ್ತರ ಸಂಗಮದಲ್ಲಿ ಉದ್ಘೋಷದೊಂದಿಗೆ ರಥೋತ್ಸವ ವೈಭವಯುತವಾಗಿ ನಡೆಯಿತು. ಕುರಿಗಾಹಿಗಳು ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕುಂದೂರು ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಭಕ್ತರ ಸಂಗಮದಲ್ಲಿ ಉದ್ಘೋಷದೊಂದಿಗೆ ರಥೋತ್ಸವ ವೈಭವಯುತವಾಗಿ ನಡೆಯಿತು.ಕುರಿಗಾಹಿಗಳು ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದರು. ಗ್ರಾಮದ ದೇಗುಲದ ಬಳಿ ಭಕ್ತರು, ಗ್ರಾಮಸ್ಥರು ಸಾಕಷ್ಟು ಮಂದಿ ಸೇರಿದರು.ರಥಕ್ಕೆ ಭಕ್ತರು ಸಮರ್ಪಿಸಿದ್ದ ವಿವಿಧ ಜರತಾರಿ, ರೇಷ್ಮೆ ಸೀರೆ, ಬಟ್ಟೆಗಳಿಂದ ಶೃಂಗರಿಸಿ ವಿವಿಧ ವರ್ಣಗಳ ಬಾವುಟಗಳಿಂದ ಅಲಂಕರಿಸಲಾಗಿತ್ತು. ವಿವಿಧ ಪರಿಮಳ ಪುಷ್ಪಗಳ ಮಾಲೆಯಿಂದ ರಥವನ್ನು ಪುಷ್ಪರಥವಾಗಿ ಮಾಡಿದರು.
ವೀರಭದ್ರೇಶ್ವರಸ್ವಾಮಿ ಉತ್ಸವಮೂತಿಯನ್ನು ಮೆರವಣಿಗೆ ಮಾಡುವ ಮೂಲಕ ರಥಬೀದಿಗೆ ಸಾಗಿದರು. ರಥವನ್ನು ಪ್ರದಕ್ಷಿಣೆ ಹಾಕಿಸಿ ಸ್ವಾಮಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಸರ್ವಾಲಂಕಾರ ಪ್ರಿಯದೇವರಿಗೆ ಅಗ್ರ ಪೂಜೆಯನ್ನು ಸಲ್ಲಿಸಲಾಯಿತು.ಅರ್ಚಕರು ರಥೋತ್ಸವ ನಿರ್ವಿಘ್ನವಾಗಿ ಸಾಗಲು ರಥದ ಸುತ್ತ ಬಲಿ, ಕಳಶಪೂಜೆ, ನವಗ್ರಹ ಪೂಜೆಯಂತಹ ಹಲವು ಪೂಜಾ ವಿದಿ ವಿಧಾನಗಳನ್ನು ಮಾಡಿದರು. ಭಕ್ತರು ಗ್ರಾಮದ ಹೊರವಲಯದ ಗುಡಿಯವರೆಗೆ ರಥ ಎಳೆದರು. ಹೊಲಗದ್ದೆ, ಬದುಗಳು ಎನ್ನದೆ ರಥ ಹಳ್ಳ ದಿಣ್ಣೆ ಏರಿಉಯ್ಯಾಲೆಯಂತೆ ಸುಗಮವಾಗಿ ಸಾಗಿತು.
ವೀರಭದ್ರೇಶ್ವರಸ್ವಾಮಿ ಉಘೇ ಉಘೇ ಎಂದು ಭಕ್ತರು ಜಯ ಘೋಷಕೂಗುತ್ತ ಸರಸರನೆ ರಥವನ್ನು ಎಳೆದರು. ಹಣ್ಣು ಧವನ ಎಸೆದುಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಪ್ರಾರ್ಥಿಸಿದರು. ಕುರಿಗಾಹಿಗಳು ರೋಗರುಜಿನ ಬಾರದಂತೆ ದೇವರಲ್ಲಿ ಪ್ರಾರ್ಥಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿದರು. ಯುವಕರು, ದಾನಿಗಳು ಸ್ವಯಂ ಪ್ರೇರಣೆಯಿಂದ ನೀರು ಮಜ್ಜಿಗೆ ಪಾನಕ, ಅನ್ನದಾಸೋಹವನ್ನು ವಿತರಿಸಿ ಭಕ್ತರ ಪ್ರಶಂಸೆಗೆ ಪಾತ್ರರಾದರು.ಬೆಡದಹಳ್ಳಿ, ಭಾರತೀಪುರ, ಸುತ್ತಮುತ್ತಲ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ವೀರಭದ್ರೇಶ್ವರಸ್ವಾಮಿಯ ಅಸಂಖ್ಯಾತ ಭಕ್ತರು ರಥ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.