ಶಣವಿನಕುಪ್ಪೆಯಲ್ಲಿ ವೀರಾಂಜನೇಯಸ್ವಾಮಿ ದೇಗುಲ ಉದ್ಘಾಟನೆ

| Published : Nov 30 2023, 01:15 AM IST

ಸಾರಾಂಶ

ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ, ಶ್ರೀ ವೀರಭದ್ರೇಶ್ವರ ಟ್ರಸ್ಟ್ ಸುಕ್ಷೇತ್ರ ಧರ್ಮಸ್ಥಳ, ಭಕ್ತಾದಿಗಳು ಮತ್ತು ಮುಜರಾಯಿ ಇಲಾಖೆ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಭಾರತ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಂಪತ್ಭರಿತವಾಗಿದ್ದು, ಇಲ್ಲಿ ಭಕ್ತಿಗೆ ಯಾವತ್ತೂ ಕೊರತೆಯಿಲ್ಲ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶಣವಿನ ಕುಪ್ಪೆ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ, ಶ್ರೀ ವೀರಭದ್ರೇಶ್ವರ ಟ್ರಸ್ಟ್ ಸುಕ್ಷೇತ್ರ ಧರ್ಮಸ್ಥಳ, ಭಕ್ತಾದಿಗಳು ಮತ್ತು ಮುಜರಾಯಿ ಇಲಾಖೆ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಾರತದಲ್ಲಿ ಇನ್ನು ಬಡತನ, ಊಟಕ್ಕೆ ತೊಂದರೆ ಇರಬಹುದು, ಮನೆಕಟ್ಟಲು ತೊಂದರೆ ಇರಬಹುದು. ಆದರೆ ಭಕ್ತಿಗೆ ಯಾವತ್ತೂ ಕೊರತೆ ಇಲ್ಲ ಎಂದರು.

ಒಮ್ಮೆ ಆಂಜನೇಯನಿಗೆ ಸಮುದ್ರ ದಾಟಲು ಸಮಸ್ಯೆ ಎದುರಾಗುತ್ತದೆ. ಈ ವೇಳೆ ಹನುಮ ಸೈನ್ಯ ನಾವು ನಿಮ್ಮೊಂದಿಗಿದ್ದೇವೆ. ನಮ್ಮ ಶಕ್ತಿ ಸ್ವರೂಪಿಯಾಗಿ ನೀವು ಸಮುದ್ರ ದಾಟಬೇಕೆಂದಾಗ ಆಂಜನೇಯ ಸಮುದ್ರ ದಾಟುತ್ತಾನೆ. ಅಂದರೆ, ಎಲ್ಲಿ ಜನಶಕ್ತಿ, ಜನ ಸಮುದಾಯ ಒಂದಾಗಿರುತ್ತೋ ಅವರಿಗೆ ಅಸಾಧ್ಯವಾದುದು ಯಾವುದು ಇರುವುದಿಲ್ಲ ಎಂಬುದಕ್ಕೆ ಆಂಜನೇಯ ಸಮುದ್ರ ದಾಟಿದ್ದೆ ಉದಾಹರಣೆ. ಈ ಕಲಿಯುಗದಲ್ಲಿ ಮಹತ್ವವಾದುದು ಸಂಘ ಶಕ್ತಿ. ಸಾಂಘಿಕವಾಗಿ ಮನುಷ್ಯ ಯಾವುದೇ ಕೆಲಸ ಮಾಡಿದರು ಯಶಸ್ವಿಯಾಗುತ್ತಾನೆ ಎಂಬುದು ಈ ಪ್ರಸಂಗದಿಂದ ತಿಳಿಯುತ್ತದೆ. ಅಂತಹ ವೀರಾಂಜನೇಯ ದೇವಸ್ಥಾನ ಜಿರ್ಣೋದ್ಧಾರ ಮಾಡಿ ಉದ್ಘಾಟಿಸಲಾಗಿದೆ ಎಂದರು.

ಭಕ್ತಿ ಭಾವನೆ ರಕ್ತಗತವಾಗಿದೆ: ಭಾರತೀಯರಲ್ಲಿ ಭಕ್ತಿಭಾವನೆ ರಕ್ತಗತವಾಗಿ ಬಂದಿದೆ. ಭಗವಂತನಲ್ಲಿ ನಂಬಿಕೆ, ವಿಶ್ವಾಸ, ನಿಷ್ಠೆ ಭಾರತೀಯರಲ್ಲಿ ಬಂದಿದೆ. ಭಗವಂತನ ಬಿಟ್ಟು ಭಕ್ತರಿರಲು ಸಾಧ್ಯವಿಲ್ಲ. ಹಾಗೆಯೇ ಭಕ್ತರನ್ನು ಬಿಟ್ಟು ಭಗವಂತ ಇರಲು ಸಾಧ್ಯವಿಲ್ಲ. ಭಗವಂತನಲ್ಲಿ ನಂಬಿಕೆ, ವಿಶ್ವಾಸ ಇರಬೇಕು. ಭಗವಂತನ ಅಸ್ತಿತ್ವದ ಬಗ್ಗೆ ಮನುಷ್ಯನಿಗೆ ಸಂಶಯ ಇರಬಾರದು. ಭಗವಂತ ಜಗತ್ತನೆಲ್ಲಾ ವ್ಯಾಪಿಸಿದ್ದಾನೆ. ಅದರ ಬಗ್ಗೆ ನಂಬಿಕೆ, ವಿಶ್ವಾಸ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿರಬಹುದು. ಜಗತ್ತಿನಲ್ಲಿ ಬಹಳಷ್ಟು ಆವಿಷ್ಕಾರಗಳಾಗಿರಬಹುದು. ಆದರೆ ಮನುಷ್ಯ ಬದುಕಲು ಗಾಳಿಯನ್ನು ತಯಾರಿಸಲಾಗಲ್ಲ. ಒಂದು ಕಾಳನ್ನು ವಿಜ್ಞಾನ ತಯಾರಿಸಲಾಗಲ್ಲ. ಭಗವಂತ ನೀಡಿದ ಕಾಳನ್ನೇ ಸೇವಿಸಬೇಕು. ಮನುಷ್ಯನಿಗೆ ಎಷ್ಟೇ ಅದ್ಭುತ ಶಕ್ತಿ ಇದ್ದರೂ ಭಗವಂತನ ಶಕ್ತಿಯ ಮುಂದೆ ಸಮನಾಗಿ ನಿಲ್ಲಲಾಗುವುದಿಲ್ಲ. ಅಂತಹ ನಂಬಿಕೆ, ವಿಶ್ವಾಸ ಮೂಡಲು ದೇವಸ್ಥಾನಗಳು ಸಹಕಾರಿಯಾಗಿವೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜತೆಗೆ ಇನ್ನೊಂದು ದೇವಸ್ಥಾನ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಅದರ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು. ಶಾಸಕ ಎ. ಮಂಜು ಮಾತನಾಡಿ, ದೇವಸ್ಥಾನವನ್ನು 7 ತಿಂಗಳೊಳಗೆ ಪೂರ್ಣಗೊಳಿಸಿರುವುದು ಸಂತೋಷದ ವಿಷಯ. ದೇವಸ್ಥಾನ ಮತ್ತು ಶಾಲೆ ಉರಿಗೊಂದು ಕಿರೀಟವಿದ್ದಂತೆ. ಹಾಗಾಗಿ ದೇವಸ್ಥಾನ ನಿರ್ಮಿಸಿ ಹಾಗೆ ಬಿಡದೆ ನಿತ್ಯ ದೀಪ ಹಚ್ಚಬೇಕು ಎಂದು ಹೇಳಿದರು.

ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆ. ಆರ್. ನಗರ ಕನಕ ಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ಶ್ರೀ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಟಿ. ಮಾಯಿಗೌಡನಹಳ್ಳಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ಶ್ರೀ ತೋಂಟಾದರ್ಯ ಮಠದ ಶ್ರೀ ಸ್ವತಂತ್ರಲಿಂಗ ಸ್ವಾಮೀಜಿ, ಕೊಡ್ಲಿಪೇಟೆ ಶ್ರೀ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕಿರುಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಮುಖಂಡ ರಮೇಶ್, ಸಮಾಜ ಸೇವಕ ದಿವಾಕರ್ ಗೌಡ, ನಂಜುಂಡಸ್ವಾಮಿ ಮತ್ತಿತರಿದ್ದರು.

ಇದಕ್ಕೂ ಮುನ್ನ ಅಂದರೆ ಮಂಗಳವಾರ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಂದ ಗಂಗಪೂಜೆ, ವೀರಗಾಸೆ, ಮಂಗಳವಾದ್ಯದೊಂದಿಗೆ ಗೋಮಾತೆ ನೂತನ ವಿಗ್ರಹ, ಶಿಖರ ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ, ಸಂಜೆ ದೇವಸ್ಥಾನದ ಪ್ರವೇಶ, ಗಣಪತಿಪೂಜೆಯೊಂದಿಗೆ ಪುಣ್ಯಾಹ, ನಾಂದಿ, ನವಗ್ರಹ, ಮೃತ್ಯುಂಜಯ, ಏಕಾದಶಿ ರುದ್ರ ಅಷ್ಟದಿಕ್ವಾಲಕ, ಅಷ್ಟಲಕ್ಷ್ಮಿ, ಲಕ್ಷ್ಮೀನಾರಾಯಣ, ಉಮಾಮಹೇಶ್ವರಿ, ಹೋಮ ಹವನಾದಿ, ಪ್ರಾಣಪ್ರತಿಷ್ಠಾಪನೆ ಪೂಜಾ ಕೈಂಕರ್ಯ ನಡೆದವು.