ವೀರಶೈವ ಲಿಂಗಾಯಿತರು ಒಗ್ಗಟ್ಟು ಪ್ರದರ್ಶಿಸಿ

| Published : Jun 20 2025, 12:35 AM IST

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾತಿಗಣತಿ ನಡೆಸಲು ನಿರ್ಧರಿಸಿದ್ದು, ಇದನ್ನು ವೀರಶೈವ, ಲಿಂಗಾಯಿತ ಸಮುದಾಯ ಬಹಳ ಗಂಭೀರವಾಗಿ ಪರಿಗಣಿಸಬೇಕು. ಜಾತಿ ಕಲಂಗಳಲ್ಲಿ ವೀರಶೈವ-ಲಿಂಗಾಯಿತ ಎಂದೇ ನಮೂದಿಸುವ ಮೂಲಕ ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾತಿಗಣತಿ ನಡೆಸಲು ನಿರ್ಧರಿಸಿದ್ದು, ಇದನ್ನು ವೀರಶೈವ, ಲಿಂಗಾಯಿತ ಸಮುದಾಯ ಬಹಳ ಗಂಭೀರವಾಗಿ ಪರಿಗಣಿಸಬೇಕು. ಜಾತಿ ಕಲಂಗಳಲ್ಲಿ ವೀರಶೈವ-ಲಿಂಗಾಯಿತ ಎಂದೇ ನಮೂದಿಸುವ ಮೂಲಕ ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ತಿಳಿಸಿದ್ದಾರೆ.ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಘಟಕ, ಮಹಾನಗರ ಪಾಲಿಕೆ ಘಟಕ, ತುಮಕೂರು ಆಯೋಜಿಸಿದ್ದ ಬಸವ ಜಯಂತಿ, ಮಹಾಸಭಾ ಕಾರ್ಯಾಲಯ ಪ್ರಾರಂಭೋತ್ಸವ ಹಾಗೂ ತುಮಕೂರು ಮಹಾನಗರಪಾಲಿಕೆ ಘಟಕಗಳ ಪದಾಧಿಕಾರಿಗಳ ಸೇವಾ ದೀಕ್ಷೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ರಾಜ್ಯದಲ್ಲಿ ಮೊದಲ ಜಾತಿ ಸಂಘಟನೆ ನಮ್ಮದು, 120 ವರ್ಷಗಳ ಹಿಂದೆಯೇ ಹಾನಗಲ್ ಶಿವಕುಮಾರ ಸ್ವಾಮೀಜಿಗಳು ಮಹತ್ವದ ಉದ್ದೇಶವಿಟ್ಟುಕೊಂಡು ಮಹಾಸಭಾವನ್ನು ಸ್ಥಾಪಿಸಿದ್ದಾರೆ. ಭೀಮಣ್ಣಖಂಡ್ರೆ ಅವರು ಅಧ್ಯಕ್ಷರಾಗುವವರೆಗೂ ಅಂತಹ ಅಭಿವೃದ್ದಿ ಕಾಣಲಿಲ್ಲ ಭೀಮಣ್ಣಖಂಡ್ರೆ ಅವರು ಅಧ್ಯಕ್ಷರಾದ ನಂತರ ಸಾಕಷ್ಟು ಬೆಳವಣಿಗೆ ಕಂಡಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ನಿವೇಶನ ಪಡೆದು, ಸ್ವಂತ ಕಟ್ಟಡ ಕಟ್ಟಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸ್ವಂತ ಕಟ್ಟಡದ ಕನಸು ನನಸಾಗುತ್ತಿದೆ. ತುಮಕೂರು ನಗರದಲ್ಲಿ ನಮ್ಮವರೇ ಎಂ.ಪಿ, ಎಂಎಲ್‌ಎ, ಟೂಡಾ ಅಧ್ಯಕ್ಷರು ಇದ್ದಾಗ್ಯೂ ಮಹಾಸಭಾಕ್ಕೆ ಸ್ವಂತಜಾಗ ಪಡೆಯುವಲ್ಲಿ ವಿಫಲರಾಗಿದ್ದೇವೆ. ಈಗಿನ ಅಧ್ಯಕ್ಷರ ಅವಧಿಯಲ್ಲಾದರೂ ಸ್ವಂತ ಜಾಗ ಪಡೆದು, ಕಟ್ಟಡ ಕಟ್ಟುವಲ್ಲಿ ಯಶಸ್ವಿಯಾಗಲಿ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನಮ್ಮೆಲ್ಲರ ಮೇಲೆ ಸಾಮಾಜಿಕ ಜವಾಬ್ದಾರಿಯಿದೆ. ಅದನ್ನು ಅರಿತು ನಡೆಯಬೇಕಿದೆ. ನಮ್ಮ ಮುಂದೆ ಸಾಮಾಜಿಕ ಸೇವೆ ಹಲವರು ಐಕಾನ್‌ಗಳಿದ್ದಾರೆ, ಅವರ ಸಮಾಜ ಸೇವೆ ನಮಗೆ ದಾರಿದೀಪವಾಗಬೇಕು. ಪರಸ್ವರ ಹಂಚಿಕೆ ಮೂಲಕ ವ್ಯಾಪಾರ, ವ್ಯವಹಾರ ವೃದ್ಧಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಲು ಮುಂದಾಗೋಣ ಎಂದರು.

ಸೇವಾದೀಕ್ಷೆ ಬೋಧಿಸಿದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ.ರಾಜಶೇಖರ್,ಇಂದು ಚುನಾವಣೆಯ ಮೂಲಕ ಆಯ್ಕೆಯಾದ 90 ಜನರು ಸೇವಾ ದೀಕ್ಷೆ ಪಡೆಯುತ್ತಿದ್ದು, ಸಮಾಜದ ಪ್ರತಿಯೊಬ್ಬರನ್ನು ಪರಸ್ವರ ಪ್ರೀತಿ,ವಿಶ್ವಾಸದ ಮೂಲಕ ಒಗ್ಗೂಡಿಸುವ ಕೆಲಸ ಮಾಡಬೇಕು.ವರ್ಗರಹಿತ, ವರ್ಣರಹಿತ ಸಮಾಜಕಟ್ಟಲು ನಾವೆಲ್ಲರೂ ಮುಂದಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ದೊಡ್ಡ ಸಮುದಾಯ. ಆದರೆ ಸಂಘಟನೆಯಲ್ಲಿ ಚಿಕ್ಕದಾಗಿದೆ. ಹಾಗಾಗಿ ಪ್ರತಿ ಮನೆಯಿಂದ ಒಬ್ಬ ಸದಸ್ಯನನ್ನಾದರೂ ನೊಂದಾಯಿಸಬೇಕೆಂಬ ಗುರಿ ಇಟ್ಟುಕೊಂಡು ಕೆಲಸ ಮಾಡೋಣ. ಸದಸ್ಯತ್ವಕ್ಕೆ ಹಣ ನೀಡಲು ಶಕ್ತರಲ್ಲದವರ ಹಣವನ್ನು ಮಹಾಸಭಾ ಭರಿಸಲು ಸಿದ್ಧವಿದೆ. ಸಮಾಜದಿಂದ ನಮಗೆ ಏನು ಸಿಕ್ಕಿದೆ ಎಂದು ಪ್ರಶ್ನಿಸುವ ಮೊದಲು, ನಾವು ಸಮುದಾಯಕ್ಕೆ ಏನು ಮಾಡಬಹುದು ಎಂಬುದನ್ನು ಅರಿತು ಕೆಲಸ ಮಾಡಬೇಕಾಗಿದೆ. ದಿನದ ಒಂದು ಗಂಟೆಯನ್ನು ಸಮುದಾಯದ ಸಂಘಟನೆಗೆ ಮೀಸಲಿಡುವಂತೆ ಮನವಿ ಮಾಡಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಮಹಾನಗರಪಾಲಿಕೆ ಘಟಕದ ಅಧ್ಯಕ್ಷ ಉಮಾಮಹೇಶ್, ವೀರಶೈವ-ಲಿಂಗಾಯಿತ ಸಮಾಜದ ಅಭಿವೃದ್ದಿಗೆ ಜಗದ್ಗುರು ರೇಣುಕಾಚಾರ್ಯರರ, ಬಸವಣ್ಣನವರ ಕೊಡುಗೆ ಅಪಾರವಾಗಿದೆ. ಷಟಸ್ಥಳ, ಗಣಾಚಾರಗಳ ಬಗ್ಗೆ ಅರಿವು ಪಡೆದು, ಸಮಾಜವನ್ನು ಮುನ್ನೆಡುವ ಕೆಲಸ ಆಗಬೇಕು ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾ ಕಚೇರಿಯನ್ನು ಜಯದೇವ ಹಾಸ್ಟಲ್ ಹಾಸ್ಟಲ್‌ ಆವರಣದಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಉದ್ಘಾಟಿಸಿದರು. ತುಮಕೂರು ನಗರ ವೀರಶೈವಸೇವಾ ಸಮಾಜದ ಅಧ್ಯಕ್ಷ ಚಂದ್ರಮೌಳಿ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಬೆಳ್ಳಾವಿಯ ಶ್ರೀಕಾರದ ವೀರಬಸವ ಸ್ವಾಮೀಜಿ, ಹಿರೇಮಠದ ಶ್ರೀಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಶಿವಣ್ಣ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಉಪಾಧ್ಯಕ್ಷ ಶಶಿಹುಲಿಕುಂಟೆ ಮಠ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಕೋಶಾಧ್ಯಕ್ಷ ಆರ್.ಬಿ.ಜಯಣ್ಣ, ಗೀತಾ ರುದ್ರೇಶ್, ತಳವಾರನಹಳ್ಳಿ ವಿಜಯಕುಮಾರ್, ಉಮಾಮಹೇಶ್, ಯುವಘಟಕದ ಅಧ್ಯಕ್ಷ ಡಾ.ದರ್ಶನ್ ಕೆ.ಎಲ್,ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್, ಮಹಾನಗರಪಾಲಿಕೆ ಮಹಿಳಾ ಘಟಕದ ಉಸ್ತುವಾರಿ ನಳಿನ ಶಿವಾನಂದ್, ಎಂ.ಬಿ.ಕುಮಾರ್, ಸತ್ಯಮಂಗಲ ಜಗದೀಶ್, ತರಕಾರಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

------------------ಕೋಟ್‌...

ರಾಜ್ಯದಲ್ಲಿ ಸುಮಾರು 2.50 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ವೀರಶೈವ, ಲಿಂಗಾಯಿತರು ಹೊಂದಿದ್ದು, ಈ ಹಿಂದಿನ ಜಾತಿಗಣತಿಯಲ್ಲಿ ಸಾಕಷ್ಟು ಕಡಿಮೆ ತೋರಿಸಿದ್ದಾರೆ. ಹಾಗಾಗಿ ಈ ಬಾರಿ ನಾವೆಲ್ಲರೂ ಜಾಗೃತರಾಗಿ ಜಾತಿ ಗಣತಿ ವೇಳೆ ವೀರಶೈವ, ಲಿಂಗಾಯಿತಎಂದು ನಮೂದಿಸಬೇಕು. - ಸಾಗರನಹಳ್ಳಿ ನಟರಾಜು, ಕಾರ್ಯದರ್ಶಿ, ಮಹಾಸಭಾ.

------------

ಬಾಕ್ಸ್‌...

ಫೋಟೋ, ವೇದಿಕೆ, ಖುರ್ಚಿಗೆ ಕಿತ್ತಾಡಬೇಡಿ

ವೀರಶೈವ-ಲಿಂಗಾಯಿತರಲ್ಲಿ ಸುಮಾರು 90 ಉಪಪಂಗಡಗಳಿದ್ದು, ರಾಜ್ಯದಲ್ಲಿ ಅಷ್ಟು ಪಂಗಡಗಳು ಹಿಂದುಳಿದ ವರ್ಗದ ಪಟ್ಟಿಯಲ್ಲಿವೆ. ಆದರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ 14 ಮಾತ್ರ ಸೇರಿವೆ. ಯುಪಿಎಸ್ಸಿ ಸೇರಿದಂತೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಯುವಜನರು ಅವಕಾಶ ವಂಚಿತರಾಗುತ್ತಿದ್ದಾರೆ.ಇದರ ವಿರುದ್ಧ ನಿರಂತರವಾಗಿ ಮಹಾಸಭಾ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಸದಸ್ಯತ್ವಕ್ಕೆ ಹೆಚ್ಚು ಒತ್ತು ನೀಡಬೇಕು.ಆ ಹ್ವಾನ ಪತ್ರಿಕೆಯಲ್ಲಿ ಹೆಸರು, ವೇದಿಕೆಯ ಮೇಲಿನ ಕುರ್ಚಿ, ಪೋಟೋಗಾಗಿ ಕಿತ್ತಾಡುವ ಬದಲು, ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಗೆ ಎಲ್ಲರು ತೊಡಗಿಕೊಳ್ಳಬೇಕೆಂದು ಸಾಗರನಹಳ್ಳಿ ನಟರಾಜು ಮನವಿ ಮಾಡಿದರು.