ವೀರಶೈವ ಸಂಸ್ಥೆಗಳು ಜಾಗೃತಿ ಮೂಡಿಸಲು ಮುಂದಾಗಿ

| Published : Mar 24 2024, 01:36 AM IST

ಸಾರಾಂಶ

ವೀರಶೈವ ಧರ್ಮ ಸಂಸ್ಥಾಪಕರಾದ ರೇಣುಕಾಚಾರ್ಯರ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ವೀರಶೈವ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕಾದ್ದು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯ ಎಂದು ಮಾಲೂರು ತಾಲೂಕು ಬೆಳ್ಳಾವಿ ಮಹಾಸಂಸ್ಥಾನದ ಮಠಾಧ್ಯಕ್ಷರಾದ ಮಹಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ವೀರಶೈವ ಧರ್ಮ ಸಂಸ್ಥಾಪಕರಾದ ರೇಣುಕಾಚಾರ್ಯರ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ವೀರಶೈವ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕಾದ್ದು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯ ಎಂದು ಮಾಲೂರು ತಾಲೂಕು ಬೆಳ್ಳಾವಿ ಮಹಾಸಂಸ್ಥಾನದ ಮಠಾಧ್ಯಕ್ಷರಾದ ಮಹಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ನಗರದ ಮಾತೃಶ್ರೀ ವೀರಮ್ಮನವರ ಮಠದ ಆವರಣದಲ್ಲಿ ತಾಲೂಕು ವೀರಶೈವ ಆಗಮಿಕರು, ಪುರೋಹಿತರು ಹಾಗೂ ಅರ್ಚಕರ ಸಂಘ ಏರ್ಪಡಿಸಿದ್ದ 10ನೇ ವರ್ಷದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬ ವೀರಶೈವರ ಆದ್ಯ ಕರ್ತವ್ಯ. ಕಳೆದ ೧೦ ವರ್ಷಗಳಿಂದ ಸಂಘ ನಿರಂತರವಾಗಿ ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿರುವುದು ಅಭಿನಂದನಾರ್ಹ. ವಿಶ್ವಗುರು ರೇಣುಕಾಚಾರ್ಯರು ಜಗದ್ವಿಖ್ಯಾತಿ ಪಡೆದುಕೊಂಡಿರುವ ಬಸವಣ್ಣನವರಂತೆ ವೀರಶೈವ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಇಡೀ ಜಗತ್ತಿನಲ್ಲಿ ಅಗಸ್ತ್ಯ ಮಹರ್ಷಿಗಳಿಗೆ ಶಿವವೈಶಿಷ್ಟಾಂತದ್ವೈತವನ್ನು ಬೋಧಿಸುವ ಮೂಲಕ ವೀರಶೈವ ಧರ್ಮದ ಸಂಸ್ಥಾಪಕರಾಗಿದ್ದಾರೆ. ಅಷ್ಟಾವರ್ಣದಂತಹ ಪೂಜಾ ವಿಧಿ ವಿಧಾನಗಳನ್ನು ಒಳಗೊಂಡ ಆಚರಣೆ ವೀರಶೈವ ಸಮುದಾಯದಲ್ಲಿ ವಿಶಿಷ್ಟವಾಗಿದೆ. ಸಮಾಜದಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಸಂಸ್ಕಾರ ನೀಡುವಂತಹ ವೀರಶೈವ ಧರ್ಮ ಹಾಗೂ ರೇಣುಕಾಚಾರ್ಯರ ಬಗ್ಗೆ ಧರ್ಮ ಜಾಗೃತಿ ಮೂಡಿಸುವಲ್ಲಿ ಮಠಾಧೀಶರಷ್ಟೇ ಅಲ್ಲದೆ ಇಂತಹ ವೀರಶೈವ ಸಂಘಟನೆಗಳ ಸಹಭಾಗಿತ್ವ ಅಗತ್ಯ. ಅರ್ಚಕರು ಭಕ್ತಾದಿಗಳಿಗೆ ದೇವರ ನಡುವಿನ ಕೊಂಡಿಯಂತಿದ್ದು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯ ನೆರವೇರಿಸುವ ಮೂಲಕ ಜನಮನ್ನಣೆ ಪಡೆಯಬೇಕು ಎಂದು ಹೇಳಿದರು.

ಮಠದ ವತಿಯಿಂದ ಪ್ರತಿವರ್ಷ ರೇಣುಕಾಚಾರ್ಯರ ಜಯಂತಿ ಆಚರಣೆಯ ದಾಸೋಹದ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು. ಇದೇ ರೀತಿ ಸಿದ್ಧಗಂಗೆಯ ಮಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ಪ್ರತಿವರ್ಷ ಜ.೨೧ರಂದು ನಡೆಯುವ ದಾಸೋಹ ದಿನಾಚರಣೆಗೆ ೧೦ ಮೂಟೆ ಅಕ್ಕಿಯನ್ನು ಸಹ ಕೊಡುಗೆಯಾಗಿ ನೀಡಲಾಗುವುದು. ಮಠವು ಬೆಳ್ಳಾವಿಯಲ್ಲಿ ಉಚಿತ ವಿದ್ಯಾರ್ಥಿನಿಲಯವನ್ನು ನಿರ್ಮಿಸಿದ್ದು ೨೦೨೪ರ ಜೂನ್‌ನಿಂದ ಕಾರ್ಯಾಚರಿಸಲಿದ್ದು ೫೦ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ವೀರಶೈವ ಆಗಮಿಕರು, ಪುರೋಹಿತರು, ಅರ್ಚಕರ ಸಂಘದ ಅಧ್ಯಕ್ಷ ನಟರಾಜ ಶಾಸ್ತ್ರಿಗಳು ಮಾತನಾಡಿ, ಕಳೆದ ೧೦ ವರ್ಷಗಳಿಂದ ಮಾತೃಶ್ರೀ ವೀರಮ್ಮನವರ ಮಠದ ಆವರಣದಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಗಿದೆ. ಮುಂದಿನ ವರ್ಷದ ಆಚರಣೆಯನ್ನು ಐವರು ಮಠಾಧೀಶರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಚನ್ನವೀರಯ್ಯನವರು, ಉಪಾಧ್ಯಕ್ಷರಾದ ವಿಶ್ವನಾಥಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ರಸಾದ್, ಕಾರ್ಯದರ್ಶಿ ರವೀಶ್‌ಚಂದ್ರ ಶಾಸ್ತ್ರಿ, ಸಹಕಾರ್ಯದರ್ಶಿ ಚೇತನ್, ಸಂಘಟನಾ ಕಾರ್ಯದರ್ಶಿ ಮಂಜುನಾಥಶಾಸ್ತ್ರಿ, ಶಿವಕುಮಾರಶಾಸ್ತ್ರಿ, ಖಜಾಂಚಿ ಚಂದ್ರಶೇಖರಶಾಸ್ತ್ರಿ, ವೀರಶೈವ ಸೇವಾ ಸಮಾಜದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಜೆ.ಸಿ.ವೀರಭದ್ರಯ್ಯ ಇತರರು ಉಪಸ್ಥಿತರಿದ್ದರು.