ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕ್ರೈಸ್ತ ಬಾಂಧವರ ತೆನೆ ಹಬ್ಬ - ಮೊಂತಿ ಫೆಸ್ತ್ ಪ್ರಯುಕ್ತ ಸ್ಥಳೀಯ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭಾನುವಾರ ತರಕಾರಿ ಸಂತೆಯನ್ನು ಆಯೋಜಿಸಲಾಗಿತ್ತು. ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡಲು ‘ಸಾವಯವ ತರಕಾರಿ ಸಂತೆ’ ಆಯೋಜಿಸಲಾಗಿತ್ತು.ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು, ಸಾವಯವ ಗೊಬ್ಬರದಿಂದ ಬೆಳೆದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂಡೆ, ಬಸಳೆ, ಇತರ ತರಕಾರಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ತರಕಾರಿ ಸಂತೆಗೆ ಹಲವರು ಭೇಟಿ ನೀಡಿ, ಶುದ್ಧ, ಸಾವಯವ ತರಕಾರಿ ಖರೀದಿಸಿದರು.ಈ ಸಂತೆಯಲ್ಲಿ ಭಾಗವಹಿಸಿದ ಚರ್ಚಿನ ಧರ್ಮಗುರು ಡೆನಿಸ್ ಡೆಸಾ, ತರಕಾರಿಯನ್ನು ಬೆಳೆಸಿದವರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ಉತ್ತಮ ಬೆಲೆ ಮತ್ತು ಗ್ರಾಹಕರಿಗೆ ರಾಸಾಯನಿಕ ಮುಕ್ತ ತರಕಾರಿ ಲಭಿಸಬೇಕು ಎಂಬ ಸದುದ್ದೇಶದೊಂದಿಗೆ ಆಯೋಜಿಸಿರುವ ತರಕಾರಿ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಬ್ಬದ ಆಚರಣೆಗಳು ಸರ್ವಧರ್ಮದ ಸಹಭಾಗಿತ್ವದೊಂದಿಗೆ ನಡೆದಾಗ ಸೌಹಾರ್ದಯುತ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.ತೊಟ್ಟಂ ಚರ್ಚಿನ ಶ್ರೀ ಸಾಮಾನ್ಯರ ಆಯೋಗ, ಕೆಥೊಲಿಕ್ ಸಭಾ ಸಂಘಟನೆಯ ಈ ವಿಶಿಷ್ಟ ಪ್ರಯತ್ನಕ್ಕೆ ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿಯೂ ಕೈಜೋಡಿಸಿತ್ತು. ತರಕಾರಿಗಳನ್ನು ಕೊಂಡೊಯ್ಯಲು ಕಡ್ಡಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ತರಲು ಸೂಚಿಸಿರುವುದು ಮತ್ತೊಂದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಕೆಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫರ್ನಾಂಡಿಸ್, ಸರ್ವ ಧರ್ಮಸಮನ್ವಯ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ರಾಮಪ್ಪ ಸಾಲಿಯಾನ್, ಶಬೀರ್ ಸಾಹೇಬ್, ಸೀರಾಝ್ ಮಲ್ಪೆ ಉಪಸ್ಥಿತರಿದ್ದರು. ಲವೀನಾ ಫರ್ನಾಂಡಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.