ಮಡಿಕೇರಿಯಲ್ಲಿ ಪತ್ರಿಕಾ ವಿತರಕರ ದಿನ

| Published : Sep 08 2025, 01:01 AM IST

ಸಾರಾಂಶ

ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಶ್ರಮವನ್ನು ಶ್ಲಾಘನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಳೆ, ಚಳಿ ಎಂದು ಲೆಕ್ಕಿಸದೇ ಪ್ರತಿ ದಿನ ಕೂಡ ಓದುಗರಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಶ್ರಮವನ್ನು ಶ್ಲಾಘನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪನೆ ಮಾಡಬೇಕೆಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೇಶವ ಕಾಮತ್ ಹೇಳಿದ್ದಾರೆ.

ಕೊಡಗು ಪತ್ರಕರ್ತರ ಸಂಘ ಹಾಗೂ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಮಾಡುವ ವೃತ್ತಿಯಲ್ಲಿ ಪ್ರೀತಿ ಇಟ್ಟರೆ ನಾವು ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ. ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ ಅದೆಷ್ಟೋ ಮಂದಿ ಇಂದು ಸಾಧನೆ ಮಾಡಿದ್ದಾರೆ. ಪತ್ರಿಕಾ ವಿತರಕರಿಗೆ ಸರ್ಕಾರದ ಸೌಲಭ್ಯಗಳು ಕೂಡ ದೊರಕುವಂತೆ ಆಗಬೇಕು. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿದರೆ ಸಹಕಾರ ನೀಡಲಾಗುವುದು ಎಂದರು.

ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ ಇಂದಿಗೂ ಕೂಡಾ ಪತ್ರಿಕಾ ವಿತರಣೆ ಕಷ್ಟಕರವಾಗಿದೆ ಅಲ್ಲದೆ ಸವಾಲಿನ ಕೆಲಸ. ಓದುಗರ ವಾಟ್ಸಪ್ ಗ್ರೂಪ್ ರಚಿಸಿ ಪತ್ರಿಕಾ ವಿತರಣೆ ವಿಳಂಬವಾದರೂ ಕೂಡಾ ಅದನ್ನು ತಲುಪಿಸುವ ವ್ಯವಸ್ಥೆ ಕೊಡಗಿನಲ್ಲಿ ಮಾಡಲಾಗಿರುವುದು ಮೆಚ್ಚುವ ಕೆಲಸ ಎಂದರು.

ಕೊಡಗಿನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ ಶಕ್ತಿ ಪ್ರತಿಷ್ಠಾನದಿಂದ ಒಂದು ಲಕ್ಷ ರುಪಾಯಿ ನೀಡಲಾಗುವುದು ಎಂದು ಇದೇ ಸಂದರ್ಭ ಘೋಷಿಸಿದರು.

ತಾವು ವಿತರಣೆ ಮಾಡಿದ ಪತ್ರಿಕೆಗಳ ಹಣ ಕೆಲವು ಓದುಗರಿಂದ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಆದರೂ ವಿತರಕರು ತಾವು ಮಾಡುವ ಕೆಲಸದಲ್ಲಿ ಆದಾಯವನ್ನು ನೋಡದೆ ನಷ್ಟವಾದರೂ ಸೇವೆಯ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಮುದ್ರಣ ಮಾಧ್ಯಮ ಪರಿಣಾಮಕಾರಿಯಾಗಿದೆ. ಯುವ ಜನಾಂಗ ಪತ್ರಿಕೆ ತೆಗೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದರು.

ಹಿರಿಯ ಪತ್ರಕರ್ತರಾದ ಟಿ.ಪಿ. ರಮೇಶ್ ಪ್ರಾಸ್ತಾವಿಕ ಮಾತನಾಡಿ ಪತ್ರಿಕಾ ವಿತರಕರು ಜನರ ನಾಡಿಯನ್ನು ಅರಿತು ಕೆಲಸ ಮಾಡುವವರು. ಓದುಗರಿಗೆ ಹಾಗೂ ವಿತರಕರಿಗೆ ಪತ್ರಿಕೆ, ಸೇತುವೆ ಇದ್ದಂತೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಪತ್ರಿಕಾ ವಿತರಣೆಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಆದರೂ ಮೂಲೆ ಮೂಲೆಗೂ ಪತ್ರಿಕೆ ತಲುಪಿಸುವ ಕೆಲಸದಲ್ಲಿ ಪತ್ರಿಕಾ ವಿತರಕರು ಶ್ರಮಿ ವಹಿಸುತ್ತಾರೆ. ವಿತರಕರ ಬದುಕು, ಭವಿಷ್ಯದ ಬಗ್ಗೆ ಅವಲೋಕನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

ಪತ್ರಿಕಾ ವಿತರಕರಿಗೆ ಭವನ ನಿರ್ಮಾಣ ಮಾಡಬೇಕಿದೆ ಎಂದು ಮನವಿ ಮಾಡಿದರು.

ಹಿರಿಯ ಪತ್ರಿಕಾ ವಿತರಕರಾದ ವಸಂತ್ ಮಾತನಾಡಿ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಸವಲತ್ತು ದೊರಕಬೇಕು ಎಂದರು.

ದಿ ಹಿಂದು ಪತ್ರಿಕೆ ಮಂಗಳೂರಿನ ಡೆಪ್ಯುಟಿ ಮ್ಯಾನೇಜರ್ ಸುರೇಂದ್ರ ಶೆಟ್ಟಿ ಮಾತನಾಡಿ, ಪತ್ರಿಕಾ ವಿತರಕರಿಗೆ ನಿವೃತ್ತಿ ಇಲ್ಲ. ಆದಾಯಕ್ಕೆ ಮಾಡುತ್ತಿಲ್ಲ. ಸೇವೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೊಡಗು ಪತ್ರಕರ್ತರ ಸಂಘದಿಂದ 2022 ರಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆಯೆಂದು ತಿಳಿಸಿ, ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿ ಆದಷ್ಟು ಶೀಘ್ರ ಚಾಲನೆ ನೀಡಬೇಕು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಜಿ. ಸತೀಶ್, ಹಿರಿಯ ಪತ್ರಿಕಾ ಓದುಗರಾದ ಪಿ.ಎ. ನಾಣಯ್ಯ ಇದ್ದರು.

ಕೊಡಗು ಪತ್ರಕರ್ತರ ಸಂಘದ ಸದಸ್ಯರಾದ ಪಿ.ಎಂ. ರವಿ ನಿರೂಪಿಸಿದರೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿ, ಅರುಣ್ ವಂದಿಸಿದರು.