ಸಾರಾಂಶ
ಕನ್ನಡಪ್ರಭ ಎಂದರೆ ಮಡಿಕೇರಿ
1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ) ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ 60ನೇ ಪುಣ್ಯಸ್ಮರಣೆ ಮಡಿಕೇರಿಯಲ್ಲಿ ನಡೆಯಿತು. ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಟ್ರಸ್ಟ್ ಸಹಯೋಗದಲ್ಲಿ ಸ್ಕ್ವಾ.ಲೀ.ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ನಿವೃತ್ತ ಸೇನಾಧಿಕಾರಿಗಳು, ಯೋಧರು, ಜನಪ್ರತಿನಿಧಿಗಳು, ಕೊಡವ ಸಮಾಜದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ವೀರ ಸೇನಾನಿಗೆ ಗೌರವ ಅರ್ಪಿಸಿದರು.ಸ್ಕ್ವಾ.ಲೀ.ಅಜ್ಜಮಾಡ ಬಿ.ದೇವಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು ದೇಶ ಹಾಗೂ ದೇಶದ ಪ್ರಜೆಗಳನ್ನು ರಕ್ಷಿಸುತ್ತಿರುವ ವೀರ ಯೋಧರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿ. ನಮ್ಮನ್ನು ದೇವರು ರಕ್ಷಿಸುತ್ತಾರೆ ಎಂದು ನಾವು ಸದಾ ದೇವರನ್ನು ಸ್ಮರಿಸುತ್ತೇವೆ. ನಮ್ಮನ್ನು ಸುರಕ್ಷಿತವಾಗಿಟ್ಟಿರುವ ಸೈನಿಕರು ಕೂಡ ದೇವರಿಗೆ ಸಮಾನರಾಗಿದ್ದ ನಮಗಾಗಿ ಜೀವ ಕೊಟ್ಟ ಹುತಾತ್ಮರ ಸ್ಮರಣೆ ನಮ್ಮ ಕರ್ತವ್ಯ ಎಂದರು.
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ದೇಶದ ರಕ್ಷಣೆಗಾಗಿ ಹುತಾತ್ಮರಾಗುವ ಮೂಲಕ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆೆ. ಇವರ ಆದರ್ಶವನ್ನು ಯುವ ಸಮೂಹ ಮೈಗೂಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ದೇಶಪ್ರೇಮದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದು ಶತ್ರುಗಳೊಂದಿಗೆ ಹೋರಾಡಿ ದೇಶಪ್ರೇಮ ಮೆರೆದಿದ್ದಾರೆ ಎಂದು ಸ್ಮರಿಸಿದರು.
ನಿವೃತ್ತ ಸೇನಾಧಿಕಾರಿ ಬಾಳೆಯಡ ಮಂದಪ್ಪ ಮಾತನಾಡಿ, ಅಜ್ಜಮಾಡ ದೇವಯ್ಯ ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ ದೇಶದ ರಕ್ಷಣೆಗಾಗಿ ಜೀವ ನೀಡಿದ್ದಾರೆ. ಮಹಾವೀರ ಚಕ್ರ ಪುರಸ್ಕೃತ ದೇವಯ್ಯ ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಇವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.ಇಂದು ಭಾರತೀಯ ವಾಯುಸೇನೆ ನಮ್ಮ ದೇಶದಲ್ಲೇ ನಿಂತು ಶತ್ರು ರಾಷ್ಟ್ರದ ಮೇಲೆ ಹೋರಾಟ ನಡೆಸುವಷ್ಟು ಸಮರ್ಥವಾಗಿದೆ. ಅಂದು ಅಜ್ಜಮಾಡ ದೇವಯ್ಯ ಅವರು ಶತ್ರುರಾಷ್ಟ್ರದೊಳಗೆ ನುಗ್ಗಿ ಸಾಹಸದಿಂದ ಹೋರಾಟ ನಡೆಸುವ ಮೂಲಕ ವಾಯುಸೇನೆಯ ಗೌರವವನ್ನು ಹೆಚ್ಚಿಸಿದ್ದರು ಎಂದು ಶ್ಲಾಘಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ನ ಪ್ರಮುಖರಾದ ಉಳ್ಳಿಯಡ ಪೂವಯ್ಯ ಅವರು ಮಾತನಾಡಿ ದೇಶಕ್ಕಾಗಿ ಬಲಿದಾನಗೈದ ಅಜ್ಜಮಾಡ ದೇವಯ್ಯ ಅವರ ಪುಣ್ಯಸ್ಮರಣೆ ಪ್ರತಿವರ್ಷ ಸೆ.7ರಂದು ರಾಜ್ಯವ್ಯಾಪಿ ಆಚರಿಸುವಂತಾಗಬೇಕು ಎಂದರು.ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ವೀರ ಸೇನಾನಿಗಳು ತಮ್ಮ ಬಲಿದಾನದ ಮೂಲಕ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅಜ್ಜಮಾಡ ದೇವಯ್ಯ ಅವರು ಸೇರಿದಂತೆ ಸಹಸ್ರ ಸಹಸ್ರ ಸೈನಿಕರು ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇವರ ಕೊಡುಗೆ ಅವಿಸ್ಮರಣೀಯ ಎಂದರು.
ನಿವೃತ್ತ ಯೋಧರಿಗೆ ಭದ್ರತೆ ಬೇಕು:ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸೈನಿಕರು ತಮ್ಮ ಜೀವದ ಹಂಗು ತೊರೆದು ದೇಶಸೇವೆಯಲ್ಲಿ ತೊಡಗಿರುವುದರಿಂದ ನಾವುಗಳು ಸುರಕ್ಷಿತರಾಗಿದ್ದೇವೆ. ಆದರೆ ದೇಶವನ್ನು ರಕ್ಷಿಸಿ ನಿವೃತ್ತರಾಗಿ ಬರುವ ಯೋಧರಿಗೆ ಇಂದು ಜೀವನ ಭದ್ರತೆ ಮತ್ತು ಗೌರವ ಇಲ್ಲದಾಗಿದೆ. ಸರ್ಕಾರ ನಿವೃತ್ತ ಯೋಧರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದರು.ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕಿ ತೆನ್ನಿರ ಟೀನಾ, ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ, ಅಜ್ಜಮಾಡ ಒಕ್ಕದ ಅಧ್ಯಕ್ಷ ಲವ ಕುಶಾಲಪ್ಪ, ಪ್ರಮುಖರಾದ ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಬೆಳ್ಯಪ್ಪ, ಅಜ್ಜಮಾಡ ರಮೇಶ್, ಅಜ್ಜಮಾಡ ಅಯ್ಯಣ್ಣ, ಅಜ್ಜಮಾಡ ಮಂಜುನಾಥ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಾನಿಕ ಆಯುಕ್ತ ಹೆಚ್.ಆರ್.ಮುತ್ತಪ್ಪ, ಜಿಲ್ಲಾ ತರಬೇತಿ ಆಯುಕ್ತ ಕೆ.ಯು.ರಂಜಿತ್, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಮಾಜಿ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಸೇರಿದಂತೆ ಕೊಡವ ಮಕ್ಕಡ ಕೂಟದ ಸದಸ್ಯರು, ನಿವೃತ್ತ ಯೋಧರು, ಸೇನಾಭಿಮಾನಿಗಳು ಹಾಗೂ ಅಜ್ಜಮಾಡ ಕುಟುಂಬಸ್ಥರು ಹಾಜರಿದ್ದರು. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರಿಗೆ ಪುಷ್ಪನಮನ ಸಲ್ಲಿಸಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.