ಸಾರಾಂಶ
ಬೆಂಗಳೂರು : ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪ ಮತ್ತು ಬಾಯಾರಿಕೆಯಿಂದ ರಕ್ಷಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ತಂಪಾದ ಆಹಾರ ನೀಡುತ್ತಿದ್ದಾರೆ. ಜೊತೆಗೆ ಪ್ರಾಣಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ಆಹ್ಲಾದಕರ ವಾತಾವರಣ ಸೃಷ್ಠಿಸಿದ್ದಾರೆ.
ಬನ್ನೇರುಘಟ್ಟದ ಸುತ್ತಮುತ್ತ ಉಷ್ಣಾಂಶ 36-38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬಿಸಿಲಿನ ಝಳಕ್ಕೆ ಉದ್ಯಾನದ ಪ್ರಾಣಿಗಳು ಹೈರಾಣಾಗಿವೆ. ಉದ್ಯಾನದ ಪ್ರಾಣಿಗಳನ್ನು ಈ ತಾಪಮಾನದಿಂದ ರಕ್ಷಿಸಲು ಜಿಂಕೆ, ಮಂಗಗಳು ಹಾಗೂ ಕರಡಿಗಳಿಗೆ ವಿಶೇಷ ಪೌಷ್ಟಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.
ಎಲ್ಲ ಬಗೆಯ ಹಣ್ಣು, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಹೊಸ ಬಗೆಯ ಆಹಾರವನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ. ಹೊಸ ರೂಪದ, ವಿಶಿಷ್ಟ ರುಚಿಯ ಹಣ್ಣಿನ ಐಸ್‌ಕ್ಯಾಂಡಿಗಳಿಗಂತೂ ಪ್ರಾಣಿಗಳು ಮಾರುಹೋಗಿ ಖುಷಿಯಿಂದ ಆಹಾರ ಸ್ವೀಕರಿಸುತ್ತಿವೆ.
ಜೀವಶಾಸ್ತ್ರಜ್ಞೆ ಐಶ್ವರ್ಯ ಮಾತನಾಡಿ, ಪ್ರಾಣಿಗಳು ಬೇಸಿಗೆಯಲ್ಲಿ ಸಹಜವಾಗಿ ತಂಪಾದ ವಾತಾವರಣ ಬಯಸುತ್ತವೆ. ಹಾಗಾಗಿ ಉದ್ಯಾನದಲ್ಲಿ ಹನಿ ನೀರಾವರಿ ಮೂಲಕ ನೀರು ಸಿಂಪಡಿಸಲಾಗುತ್ತಿದೆ. ಕೆಲವು ಪ್ರಾಣಿಗಳು ಕೆಸರಿನಲ್ಲಿ ಇರಲು ಇಚ್ಚಿಸುತ್ತವೆ. ಅದಕ್ಕಾಗಿ ಅಲ್ಲಲ್ಲಿ ಕೆಸರು ಮತ್ತು ನೀರಿನ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಸದಾ ನೀರು ತುಂಬಿರುವಂತೆ ನೋಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಮಯ ಪ್ರಾಣಿಗಳು ನೀರಿನಲ್ಲಿ ಕಳೆಯುತ್ತಿವೆ ಎಂದರು.