ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪರೋಪಕಾರಕ್ಕೆ ಮತ್ತೊಂದು ಹೆಸರೇ ಸಿ.ವಿ.ವೆಂಕಟರಾಯಪ್ಪನವರು ಎಂದು ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ದತ್ತಿ ಅಧ್ಯಕ್ಷ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.ನಗರದ ಹೊರವಲಯದ ಶ್ರೀ ಸಿ.ವಿ.ವಿ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ದಿ.ಸಿ.ವಿ ವೆಂಕಟರಾಯಪ್ಪ109ನೇ ಜನ್ಮ ದಿನಾಚರಣೆ ಮತ್ತು ದತ್ತಿಯ 28ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ 50 ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಿರುವುದು ಸಾಮಾನ್ಯ ಮಾತಲ್ಲ. ಇವರ ಹಾಕಿಕೊಟ್ಟ ಭದ್ರವಾದ ಅಡಿಪಾಯದ ಮೇಲೆ ಚಿಕ್ಕಬಳ್ಳಾಪುರ ಇಂದು ಶಿಕ್ಷಣ ಕಾಶಿಯಾಗಿ ಬದಲಾಗಿದೆ. ಶಾಸಕರಾಗಿ, ಶಿಕ್ಷಣ ಸಂಸ್ಥೆಗಳ ನಿರ್ಮಾತೃವಾಗಿ,ಸಮಾಜ ಸೇವಕರಾಗಿ ಸಿವಿವಿ ಅವರದ್ದು ಬಹುದೊಡ್ಡ ವ್ಯಕ್ತಿತ್ವ ಎಂದು ಬಣ್ಣಿಸಿದರು.
ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ದತ್ತಿ ದಿನಾಚರಣೆ ಅಂಗವಾಗಿ ಶಿಕ್ಷಣ ಸಂಸ್ಥೆಯು ತನ್ನ ಎಲ್ಲ ಶಾಖೆಯ ಸಿಬ್ಬಂದಿಗಾಗಿ ಕ್ರೀಡೆ, ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಬಹುಮಾನ ನೀಡಿದೆ. ಪತ್ರಕರ್ತರಿಗಾಗಿಯೇ ಕ್ರೀಡಾ ಕೂಟ ಏರ್ಪಡಿಸುತ್ತಾ ಬಂದಿರುವುದು ಸಂಸ್ಥೆಯ ವಿಶೇಷ ಎಂದರು.ರಕ್ತ ಸಂಗ್ರಹದಲ್ಲಿ ದಾಖಲೆ
ದತ್ತಿ ದಿನಾಚರಣೆಯ ಮತ್ತೊಂದು ಇತಿಹಾಸ ಎಂದರೆ ಅದು ರಕ್ತದಾನ ಕಾರ್ಯಕ್ರಮ. ಶಿಬಿರದಲ್ಲಿ ಒಂದೇ ದಿನದಲ್ಲಿ 2148 ಯೂನಿಟ್ ರಕ್ತ ಸಂಗ್ರಹ ರಾಜ್ಯದಲ್ಲಿ ಯಾರೂ ಮಾಡಿಲ್ಲ. ಇದನ್ನು ಮುರಿಯುವ ಕೆಲಸವನ್ನು ಮುಂದಿನ ದಿನಗಳಲ್ಲಿ ಇಲ್ಲಿಯೇ ಮಾಡಲಾಗುವುದು ಎಂದರು.ಎರಡು ಪುಸ್ತಕ ಬಿಡುಗಡೆ
ಇದೇ ವೇಳೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ವೆಂಕಟೇಶ್ ದೈಹಿಕ ಶಿಕ್ಷಣ ಕುರಿತು ಬರೆದ ಪುಸ್ತಕ, ಕೆ.ವಿ.ಇಂಗ್ಲೀಷ್ ಶಾಲೆಯ ಶಿಕ್ಷಕಿ ಡಿ.ಎನ್.ಪ್ರಮೀಳಾ ಬರೆದ ಕಾವ್ಯ ಕುಮುದಿನಿ ಸಂಸ್ಕೃತ ಪುಸ್ತಕಗಳನ್ನು ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಕೆವಿ ದತ್ತಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸದಸ್ಯರಾದ ಬಿ.ಮುನಿಯಪ್ಪ, ನಿರ್ಮಲಾ ಪ್ರಭು, ಸುಜಾತ ನವೀನ್ ಕಿರಣ್, ಗೀತಾ ಕೇಶವ ಮೂರ್ತಿ, ವಿಜಯಲಕ್ಷ್ಮಿ, ಇಮ್ರಾನ್ ಖಾನ್, ಆಡಳಿತಾಧಿಕಾರಿ ಡಾ.ಸಾಯಿಪ್ರಭು, ವ್ಯೆವಸ್ಥಾಪಕ ಕೆ.ಆರ್.ಲಕ್ಷ್ಮಣಸ್ವಾಮಿ. ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ಖಜಾಂಚಿ ಎಂ.ಜಯರಾಮ್, ಬಿಜಿಎಸ್ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಕಾರ್ಯಕ್ರಮದ ಸಂಚಾಲಕ ಹಾಗೂ ಬಿಪಿಎಡ್ ಪ್ರಾಂಶುಪಾಲ ಆರ್. ವೆಂಕಟೇಶ್, ಪಿಆರ್ ಓ ಎನ್.ವೆಂಕಟೇಶ್,ಫರೀಧ್ ಬಾಬು ಇದ್ದರು.
ಸಿಕೆಬಿ-1 ಚಿಕ್ಕಬಳ್ಳಾಪುರ ದತ್ತಿ ದಿನಾಚರಣೆಯಲ್ಲಿ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ನವೀನ್ ಕಿರಣ್ ಬಿಡುಗಡೆ ಮಾಡಿದರು.