ವೆಂಕಟೇಶ್ ಕೊಟ್ಟೂರು ನಿರ್ದೇಶನದ ರಾಗಭೈರವಿ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿಯ ಗರಿ

| Published : Jan 28 2025, 12:48 AM IST

ಸಾರಾಂಶ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಬುಧವಾರ ಪ್ರಕಟಗೊಂಡಿದ್ದು, ಅತ್ಯತ್ತಮ ಹಿನ್ನೆಲೆ ಗಾಯಕಿಯಾಗಿ ಡಾ.ಜಯದೇವಿ ಜಂಗಮಶೆಟ್ಟಿ ಪ್ರಶಸ್ತಿ ಪಡೆದಿದ್ದಾರೆ.

ಕೂಡ್ಲಿಗಿ: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಬುಧವಾರ ಪ್ರಕಟಗೊಂಡಿದ್ದು, ಅತ್ಯತ್ತಮ ಹಿನ್ನೆಲೆ ಗಾಯಕಿಯಾಗಿ ಡಾ.ಜಯದೇವಿ ಜಂಗಮಶೆಟ್ಟಿ ಪ್ರಶಸ್ತಿ ಪಡೆದಿದ್ದಾರೆ. ಅಖಂಡ ಕೂಡ್ಲಿಗಿ ತಾಲೂಕಿನ ವೆಂಕಟೇಶ್ ಕೊಟ್ಟೂರು ನಿರ್ದೇಶನದ ರಾಗಭೈರವಿ ಸಂಗೀತ ಪ್ರಧಾನ ಚಲನಚಿತ್ರದ ಗೀತೆ ಹಾಡಿದ್ದರಿಂದ ಈ ಪ್ರಶಸ್ತಿ ದೊರಕಿದೆ. ಗಾಯಕಿಯ ಜತೆಗೆ ಆ ಸಿನೆಮಾದ ನಿರ್ದೇಶಕರಿಗೂ ಪ್ರಶಸ್ತಿಯಿಂದ ಉತ್ಸಾಹ ಇಮ್ಮಡಿಸಿದೆ.ಅಖಂಡ ಕೂಡ್ಲಿಗಿ ತಾಲೂಕಿನ 48 ವಯಸ್ಸಿನ ವೆಂಕಟೇಶ್ ಕೊಟ್ಟೂರು ಸಿನೆಮಾದಲ್ಲಿ ಕೆಲಸ ಮಾಡಬೇಕೆಂಬ ಹೆಬ್ಬಯಕೆಯಿಂದ ಕಾಲೇಜು ಓದುವ ವಯಸ್ಸಿನಲ್ಲಿಯೇ ಕೊಟ್ಟೂರು ಬಿಟ್ಟು ಬೆಂಗಳೂರು ಸೇರಿಕೊಂಡರು. ಅಲ್ಲಿ ಪಿ.ಶೇಷಾದ್ರಿ ಪರಿಚಯವಾದ ನಂತರ 2001ರಲ್ಲಿ ಶೇಷಾದ್ರಿ ನಿರ್ದೇಶನದ ಅತಿಥಿ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದ್ದು, ಈ ಚಲನಚಿತ್ರಕ್ಕೆ ವೆಂಕಟೇಶ್ ಕೊಟ್ಟೂರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2004ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಬೇರು, 2005ರಲ್ಲಿ ತುತ್ತೂರಿ ಚಲನಚಿತ್ರಗಳಲ್ಲೂ ನಿರ್ದೇಶನ ಕೆಲಸ ಮಾಡಿದ್ದಾರೆ. ಹತ್ತು ಹಲವು ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿರುವ ವೆಂಕಟೇಶ್ ಕೊಟ್ಟೂರು ರಾಗಭೈರವಿ ಚಲನಚಿತ್ರಕ್ಕೆ ಮೊದಲ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ದೊರಕಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

2019ರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಪ್ರಧಾನವಾಗಿಟ್ಟುಕೊಂಡು ರಾಗಭೈರವಿ ಚಿತ್ರ 12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ-2020, 25ನೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2019, ಮೈಸೂರು ದಸರಾ ಚಲನಚಿತ್ರೋತ್ಸವ -2019ಕ್ಕೆ ಆಯ್ಕೆಯಾಗಿದೆ.

ರಾಗಭೈರವಿ ನಿರ್ಮಾಣಕ್ಕೆ ಕಥೆ, ಸಂಭಾಷಣೆ, ನಿರ್ಮಾಪಕರಾದ ಹರೀಶ್, ನಿರ್ದೇಶಕ ವೆಂಕಟೇಶ್ ಕೊಟ್ಟೂರು ಹಿಂದೂಸ್ತಾನಿ ಸಂಗೀತ ಹಿನ್ನೆಲೆಯಲ್ಲಿ ಉತ್ತಮ ಕಥೆ ಹಂದರ ಹೆಣೆದಿದ್ದಾರೆ. ಈ ಚಲನಚಿತ್ರಕ್ಕೆ ನಿರ್ದೇಶಕರು ಮತ್ತು ಹಿನ್ನೆಲೆ ಗಾಯಕಿಯರ ಅನ್ವೇಷಣೆಯಲ್ಲಿ ಕೊನೆಗೆ ನಿರ್ದೇಶಕರಾಗಿ ವೆಂಕಟೇಶ್ ಕೊಟ್ಟೂರು, ಹಿನ್ನೆಲೆ ಗಾಯಕಿಯಾಗಿ ಡಾ.ಜಯದೇವಿ ಜಂಗಮಶೆಟ್ಟಿ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.

ನಾನು ನಿರ್ದೇಶಿಸಿದ ಚಲನಚಿತ್ರಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಡಾ.ಜಯದೇವಿ ಜಂಗಮಶೆಟ್ಟಿ ಆಯ್ಕೆಯಾಗಿರುವುದು ಸಂತಸವಾಗಿದೆ. ಸದ್ಯ ಇನ್ನೊಂದು ಚಲನಚಿತ್ರದ ತಯಾರಿಕೆಯಲ್ಲಿ ತೊಡಗಿದ್ದು, ಲೋಕೇಶನ್ ಹುಡುಕಾಟದಲ್ಲಿದ್ದೇವೆ ಎನ್ನುತ್ತಾರೆ ರಾಗಭೈರವಿ ಚಲನಚಿತ್ರದ ನಿರ್ದೇಶಕ ವೆಂಕಟೇಶ್ ಕೊಟ್ಟೂರು.