ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೇಣೂರಿನಲ್ಲಿ ಶ್ರೀ ಗೋಮಟೇಶನ ವಿಗ್ರಹಕ್ಕೆ ಫೆ.22ರಿಂದ ರಾತ್ರಿ ವೇಳೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಭಾನುವಾರ ಹಗಲಿನಲ್ಲಿ ವಿಶೇಷವಾದ ಅಭಿಷೇಕ ನಡೆಯಿತು.
ಯುಗಳ ಮುನಿಶ್ರೀಗಳಾದ 108 ಶ್ರೀ ಅಮೋಘಕೀರ್ತಿ ಮಹಾರಾಜರ ಹಾಗೂ 108 ಶ್ರೀ ಅಮರಕೀರ್ತಿ ಮುನಿಮಹಾರಾಜರ ದೀಕ್ಷಾ ಮಹೋತ್ಸವದ ರಜತ ಸಂಭ್ರಮದ ದಿನವಾಗಿದ್ದುದರಿಂದ ಸ್ವತಃ ಮುನಿಶ್ರೀಗಳೇ ಅಟ್ಟೋಳಿಗೆ ಮೇಲೇರಿ ಬಾಹುಬಲಿಯ ಶಿರಕ್ಕೆ ಅಭಿಷೇಕ ಮಾಡಿದರಲ್ಲದೆ ನೇತೃತ್ವ ವಹಿಸಿದರು. ಮಾತಾಜಿಯವರೂ ಪಾಲ್ಗೊಂಡರು.
ಮುನಿಶ್ರೀಗಳೊಂದಿಗೆ ಬೆಂಗಳೂರು, ತುಮಕೂರು ಪ್ರದೇಶದ ಜಿನಭಂಧುಗಳು ಅಭಿಷೇಕದಲ್ಲಿ ಪಾಲ್ಗೊಂಡು ಹಗಲು ಹೊತ್ತಿನ ಅಪೂರ್ವ ಮಜ್ಜನಕ್ಕೆ ಕಾರಣರಾದರು.
ಪರಮಜಿನದೇವನಿಗೆ ಜಲಾಭಿಷೇಕವು ಹಿಮಗಿರಿಯಿಂದ ಗಂಗಾ, ಸಿಂಧು ನದಿಗಳು ಹರಿದು ಬಂದಂತೆ ಧಾರೆಯಾಗಿ ಜಲವು ಹರಿದು ಬಂತು. ಪಂಚಾಮೃತ ಅಭೀಷೇಕದ ನಂತರ ಕರ್ಮ ನಾಶ ಮಾಡುವ ಎಳನೀರನ್ನು, ಭಕ್ತಿಭಾವನೆ ಮೂಡಿಸುವ ಇಕ್ಷುರಸದಿಂದ ಮಜ್ಜನ ಮಾಡಲಾಯಿತು.
ನಂತರ ನಡೆದ ನೊರೆಹಾಲಿನ ಮಹಾಮಜ್ಜನದಲ್ಲಿ ವಿರಾಟ ವಿರಾಗಿಯು ಸದ್ಗುಣ ಮೋಹನನಂತೆ ಭಾಸವಾದನು. ಕಲ್ಕಚೂರ್ಣವನ್ನು(ಅಕ್ಕಿ ಹಿಟ್ಟು) ಕೇವಲಜ್ಞಾನಿಗೆ ಅರ್ಪಿಸಿದಾಗ ಮೋಡದ ಮರೆಯಲ್ಲಿ ಚಂದ್ರನ ಪರಿಯಲ್ಲಿದ್ದಂತೆ ಕಂಡನು.
ಅರಿಶಿನ (ಹರಿದ್ರಾ)ದ ಅಭಿಷೇಕವಾದಾಗ ಹೇಮವರ್ಣವು ಶಾಂತಮೂರ್ತಿಯನ್ನು ಆವರಿಸಿತು. ನೆರೆದ ಭಕ್ತರ ಜಯಕಾರ ಮುಗಿಲುಮುಟ್ಟಿತು. ಪೂರ್ವದಲ್ಲಿನ ಸೂರ್ಯನೂ ತನ್ನ ಕಾಂತಿಯನ್ನು ದಿವ್ಯಸ್ವರೂಪದ ಮೇಲೇರಿಸಿದಾಗ ಶ್ರಾವಿಕೆಯರು ಭಕ್ತಿ ನೃತ್ಯಕ್ಕೆ ಮುಂದಾದರು.
ಕಷಾಯದ ಅಭಿಷೇಕ ಶಿರದಿಂದ ಉಂಗುಷ್ಠದವರಿಗೆ ಪಸರಿಸಿದಾಗ ಗೊಮ್ಮಟನ ದೇಹದಲ್ಲಿ ಅಂಟಿದ ಎಲ್ಲ ಜಿಗುಟು ನಿವಾರಣೆಯಾಯಿತು. ಬಳಿಕ ಚತುಷ್ಕೋನದ ಅಭಿಷೇಕವನ್ನು ಮಂತ್ರಪೂರ್ವಕವಾಗಿ ನೆರವೇರಿಸಲಾಯಿತು.
ಕೇಸರಿಯಾ ಕೇಸರಿಯಾ ಎಂಬ ಹಾಡನ್ನು ಹಾಡುತ್ತಿದ್ದಂತೆ ಕೇಸರಿ ಅಭಿಷೇಕವನ್ನು ಶ್ರಾವಕರು ನಡೆಸಿದರು. ಬಳಿಕ ಕರ್ಪೂರ ಮಿಶ್ರಿತ ಶ್ರೀಗಂಧದ ಅಭಿಷೇಕದಲ್ಲಿ ಗೊಮ್ಮಟನ ಪಾವನ ರೂಪ ಇನ್ನಷ್ಟು ಮನೋಹರವಾಗಿ ಕಂಡು ಬಂತು.
ಇದರಿಂದ ಪರಿಸರದಲ್ಲಿ ಗಂಧದ ಸುವಾಸನೆ ಹರಡಿ ಭಕ್ತರ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಕುಂಕುಮದ ಅಭಿಷೇಕದಲ್ಲಿ ಬಾಹುಬಲಿಯ ಸುಂದರ ರೂಪ ಇನ್ನಷ್ಟು ಕಂಗೊಳಿಸಿತು.
ಕೊನೆಯಲ್ಲಿ ಮಂದಾರ, ಮಲ್ಲಿಗೆ, ಕುಂದ, ಸೇವಂತಿಗೆ, ಜಾಜಿ ಮೊದಲಾದ ಹೂಗಳಿಂದ ಪುಷ್ಪವೃಷ್ಟಿ ನಡೆದಾಗ ಮತ್ತು ಬೃಹತ್ ಹಾರವನ್ನುತೊಡಿಸುವುದರ ಮೂಲಕ ಅಭಿಷೇಕದ ಪ್ರಕ್ರಿಯೆಗಳು ಕೊನೆಗೊಂಡವು. ಮಂಗಳಾರತಿಯೊಂದಿಗೆ ಹಗಲು ಹೊತ್ತಿನ ಮಹಾಮಜ್ಜನ ಸಂಪನ್ನಗೊಂಡಿತು.
ಮುನಿವೃಂದದ ಇಚ್ಛೆ ಪೂರ್ಣ: ಶ್ರವಣಬೆಳಗೊಳ ಹಾಗೂ ಧರ್ಮಸ್ಥಳದಲ್ಲಿ ಹಗಲು ಹೊತ್ತಿನಲ್ಲಿ ಅಭಿಷೇಕ ಸಂಪನ್ನವಾದರೆ, ಕಾರ್ಕಳ ಹಾಗೂ ವೇಣೂರಿನಲ್ಲಿ ರಾತ್ರಿ ಹೊತ್ತು ಅಭಿಷೇಕ ನಡೆಸಲಾಗುತ್ತದೆ.
ಮುನಿವೃಂದದವರು ರಾತ್ರಿ ವೇಳೆಯ ಅಭಿಷೇಕವನ್ನು ವೀಕ್ಷಿಸುವ ಪರಿಪಾಠವಿಲ್ಲ. ಹೀಗಾಗಿ ಮುನಿಶ್ರೀಗಳು, ಮಾತಾಜಿಯವರು ಅಭಿಷೇಕ ನಡೆಸಬೇಕು ಮತ್ತು ವೀಕ್ಷಿಸಬೇಕು ಎಂಬ ಉದ್ದೇಶದಿಂದ ಮತ್ತು ಅವರ ಇಚ್ಛೆಯಂತೆ ಒಂದು ದಿನ ಹಗಲು ಹೊತ್ತಿನಲ್ಲಿ ಮಹಾಭಿಷೇಕವನ್ನು ನಡೆಸುವ ಪದ್ಧತಿ ಹಾಕಿಕೊಳ್ಳಲಾಗಿದೆ.
ಹೀಗಾಗಿ ವೇಣೂರಿನ ಮಸ್ತಕಾಭಿಷೇಕದ ಸಂದರ್ಭದಲ್ಲಿ ಭಾನುವಾರ ಬೆಳಗ್ಗೆ ಅಭಿಷೇಕ ನೆರವೇರಿತು. ರಾತ್ರಿ ಎಂದಿನಂತೆ ಅಭಿಷೇಕದ ಪ್ರಕ್ರಿಯೆಗಳು ಮುಂದುವರಿದವು.
ಮಸ್ತಕಾಭಿಷೇಕದಲ್ಲಿ ಇಂದಿನ ಕಾರ್ಯಕ್ರಮ: ಯುಗಳ ಮುನಿಗಳು, ಮೂಡುಬಿದಿರೆ ಮಹಾಸ್ವಾಮೀಜಿ, ಕನಕಗಿರಿ ಜೈನ ಮಠದ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ಪಾವನ ಸಾನಿಧ್ಯದಲ್ಲಿ ಸೋಮವಾರ ನಿತ್ಯ ವಿಧಿ ಸಹಿತ ಬೃಹತ್ ಯಾಗ ಮಂಡಲ ಯಂತ್ರಾರಾಧನಾ ವಿಧಾನ, ಮಂಟಪ ಪ್ರತಿಷ್ಠೆ, ವೇದಿ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ನಡೆಯಲಿದೆ.
ಸಂಜೆ 6.30ರಿಂದ ಜಲಯಾತ್ರಾ ಮಹೋತ್ಸವ, ಮಾತು ರಾಹ್ವಾನಾದಿ ಕ್ರಿಯಾಯುಕ್ತ ಗರ್ಭಾವತರಣ ಕಲ್ಯಾಣ ನಡೆದು ಬಳಿಕ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))