ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ಮನೆಯಿಂದಲೇ ಹಸಿ ಕಸ ಒಣ ಕಸ ಬೇರ್ಪಡಿಸಿ, ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಪರಿಸರ ಸಂರಕ್ಷಣೆಯಲ್ಲಿ ಬಹಳ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಡಾ.ಎನ್.ಎನ್. ಮಧು ತಿಳಿಸಿದರು.ನಗರದ ಚಿಕ್ಕ ಗಡಿಯಾರದ ಆವರಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಹಾಗೂ ಕರ್ನಾಟಕ ಯೂತ್ ನೆಟ್ವರ್ಕ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ಕಸದ ರಾಶಿಯನ್ನು ಕಾಣಬಹುದು, ಇದು ಕೊಳೆಯಲು ನೂರಾರು ವರ್ಷಗಳೇಬೇಕು. ಪರಿಸರಕ್ಕೆ ಹಾನಿಕರವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಅನ್ನು ವಿರೋಧಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಗರದ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ಪಾಲಿಕೆಯು ಸದಾ ಜೊತೆಗಿರುತ್ತದೆ ಎಂದರು.
ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕು. ಇಂದೆಂದು ದಾಖಲಾಗಿರದ ತಾಪಮಾನ ಮೈಸೂರಿನಲ್ಲಿ ಈ ಬಾರಿ ನಾವು ಕಂಡಿದ್ದೇವೆ. ಪರಿಸರದ ಮೇಲಿನ ಶೋಷಣೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸರದ ಮತ್ತಷ್ಟು ವೈಪರಿತ್ಯಗಳನ್ನು ನಾವು ಎದುರಿಸಬೇಕಾಗುತ್ತದೆ. ಇವೆಲ್ಲವೂ ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಇಂದಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಕಿವಿಮಾತು ಹೇಳಿದರು.ಪರಿಸರವಾದಿ ಪ್ರೊ. ರವಿಕುಮಾರ್ ಮಾತನಾಡಿ, ತ್ಯಾಜ್ಯದ ಮೇಲಿರುವ ನಮ್ಮ ಮನಸ್ಥಿತಿ ಬದಲಾಗಬೇಕು. ಯಾವುದೂ ಕಸವಲ್ಲ, ಆದರೆ ಯಾವುದನ್ನು ಹೇಗೆ ಬಳಕೆ ಮಾಡಬೇಕು ಎಂಬುದು ನಮಗೆ ತಿಳಿದಿರಬೇಕು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಯುವ ಮನಸ್ಸುಗಳು ಮಿಡಿಯುತ್ತಿರುವುದು ಸಂತೋಷದ ವಿಷಯ. ಆದರೆ ಇಂದಿನ ಪರಿಸರದ ಸ್ಥಿತಿಗತಿಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬಹಳ ಭೀಕರವಾದ ದಿನಗಳನ್ನು ಎದುರಿಸುವ ಆತಂಕ ಎದುರಾಗುತ್ತದೆ. ಪರಿಸರ ಸಂರಕ್ಷಣೆ ನಮಗೆ ಸಿಗುವ ಅವಕಾಶವಲ್ಲ ಅದು ನಮ್ಮ ಆದ್ಯತೆಯಾಗಿರಬೇಕು ಎಂದರು.
ನಗರದ ಚಿಕ್ಕ ಗಡಿಯಾರದ ಆವರಣದಿಂದ ಆರಂಭವಾದ ಜಾಗೃತಿ ಜಾಥಾವು ಸಂತೆಪೇಟೆ ಮೂಲಕ ಸಾಗಿ ಪಾಲಿಕೆಯ ಬಳಿ ಮುಕ್ತಾಯಗೊಂಡಿತು.ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ರಾಜ್ಯ ಸಂಯೋಜಕಿ ಶಾಲಿನಿ, ನಿರ್ದೇಶಕಿ ಸರಸ್ವತಿ ಮೊದಲಾದವರು ಇದ್ದರು.