ವಕ್ಫ್‌ ಹೆಸರಿನಲ್ಲಿ ಆಸ್ತಿ ಕಬಳಿಕೆ ಖಂಡಿಸಿ ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

| Published : Nov 13 2024, 12:53 AM IST

ವಕ್ಫ್‌ ಹೆಸರಿನಲ್ಲಿ ಆಸ್ತಿ ಕಬಳಿಕೆ ಖಂಡಿಸಿ ವಿಎಚ್‌ಪಿ, ಬಜರಂಗದಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ವಕ್ಫ್‌ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ರಾಜ್ಯ ಸರ್ಕಾರ ವಕ್ಫ್‌ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈತರ ಜಮೀನು, ಮಠ, ಮಂದಿರಗಳ ಆಸ್ತಿ, ಸರ್ಕಾರದ ಆಸ್ತಿಗಳನ್ನು ಮತ್ತು ಹಿಂದೂ ಸಮಾಜದ ರುದ್ರಭೂಮಿ ಸಹ ಬಿಡದೆ, ಸರ್ಕಾರ ವಕ್ಫ್‌ ಆಸ್ತಿಗಳನ್ನಾಗಿ ಮಾಡಿದೆ. ಸರ್ಕಾರದ ಈ ನಡೆಯನ್ನು ಹಿಂದೂಪರ ಸಂಘಟನೆಗಳು ಬಲವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈಗ ಅತಿಕ್ರಮಿಸಿಕೊಂಡಿರುವ ಆಸ್ತಿಗಳನ್ನು ಕೂಡಲೇ ರೈತರಿಗೆ, ಮಠ, ಮಂದಿರಗಳಿಗೆ ಮರಳಿಸಬೇಕು. ರೈತರ ಪಹಣಿಗಳಲ್ಲಿ ವಕ್ಫ್‌ ಆಸ್ತಿಯಂತೆ ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸ್‌ನ್ನು ಮಾತ್ರ ವಾಪಸ್‌ ಪಡೆಯದೆ, ಪಹಣಿ ಕಾಲಂ 11ರಲ್ಲಿರುವ ವಕ್ಫ್‌ ಆಸ್ತಿ ಎಂದು ಬರೆದಿರುವುದನ್ನು ಯಾವುದೇ ಷರತ್ತು, ದಾಖಲೆಗಳಿಲ್ಲದೆ ಮೊದಲಿನ ಉತಾರಿನಂತೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯಪುರ, ಬಳ್ಳಾರಿ, ಯಾದಗಿರಿ, ಧಾರವಾಡ, ಬೆಳಗಾವಿ, ಬಾಗಲಕೋಟ, ಬೀದರ್‌, ವಿಜಯನಗರ ಇನ್ನೂ ಅನೇಕ ಜಿಲ್ಲೆಗಳಲ್ಲಿ ವಕ್ಫ್‌ ಹೆಸರಿನಲ್ಲಿ ಅತಿಕ್ರಮಣ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ವಕ್ಫ್‌ ಹೆಸರಿನಲ್ಲಿ ಅತಿಕ್ರಮಣ ಮಾಡಿರುವ ಆಸ್ತಿಗಳನ್ನು ಕೂಡಲೇ ರೈತರಿಗೆ ಮರಳಿಸಬೇಕು ಎಂದು ಒತ್ತಾಯಿಸಿದರು.ನಗರಸಭೆ ಉಪಾಧ್ಯಕ್ಷ ರಮೇಶ್‌ ಗುಪ್ತ ಮಾತನಾಡಿ, ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ರೈತರನ್ನು ನೋಟಿಸ್‌ ಹೆಸರಿನಲ್ಲಿ ಹೆದರಿಸಲಾಗುತ್ತಿದೆ. ಈ ಕೂಡಲೇ ಸಚಿವ ಜಮೀರ್‌ ಅಹ್ಮದ್ ಖಾನ್‌ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಪರ ನಿಲುವು ತೆಗೆದುಕೊಳ್ಳಬೇಕು. ವಕ್ಫ್‌ ಹೆಸರಿನಲ್ಲಿ ರೈತರು, ಮಠಗಳು ಹಾಗೂ ಮಂದಿರಗಳಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಕಟಿಗಿ ಜಂಬಯ್ಯ ನಾಯಕ, ಟಿ. ನಾಗರಾಜ, ಸಣ್ಣಕ್ಕಿ ರುದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌ ಶಂಕ್ರಿ, ಬಿಜೆಪಿ ಮುಖಂಡ ಕಟಿಗಿ ರಾಮಕೃಷ್ಣ, ಹಿಂದೂಪರ ಸಂಘಟನೆಯ ಮುಖಂಡರಾದ ನರಸಿಂಹಮೂರ್ತಿ, ನರಪತಸಿಂಗ್, ತಿಪ್ಪೇಸ್ವಾಮಿ, ಪ್ರವೀಣ್ ಕುಮಾರ್, ಕಟಗಿ ರಾಮಕೃಷ್ಣ ಮತ್ತಿತರರಿದ್ದರು.