ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರಿಗೆ ಗೆಲುವು ಸಮರ್ಪಣೆ: ಬಿ.ವೈ.ರಾಘವೇಂದ್ರ

| Published : Jun 05 2024, 12:31 AM IST

ಸಾರಾಂಶ

ಚುನಾವಣೆ ಕ್ಷೇತ್ರದಲ್ಲಿ ಬಂದ ಎಲ್ಲ ಅಪಪ್ರಚಾರಕ್ಕೆ ಮತದಾರರು ಸ್ಪಷ್ಟ ಉತ್ತರ ಕೊಟ್ಟು, ದೇಶದ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ನನ್ನನ್ನು ಜಿಲ್ಲೆಯ ಜನರು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ. ನಾನು ಜೀವನ ಪೂರ್ತಿ ಜನರ ಸೇವೆ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ. ಶಿವಮೊಗ್ಗದ ಬಿಜೆಪಿ ಸಂಘಟನೆ ಶಕ್ತಿಯಿಂದ ನಾನು ಗೆದ್ದಿದ್ದೇನೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ಜಿಲ್ಲಾ ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲ ಕಾರ್ಯಕರ್ತರ ಗೆಲುವು ಎಂದು ವಿಜೇತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ಮತ ಎಣಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿಯವರ ಚಿಂತನೆಗೆ ಶಿವಮೊಗ್ಗದಲ್ಲಿ ಶಕ್ತಿ ತುಂಬುವ ಕೆಲಸ ಮತದಾರರು ಮಾಡಿದ್ದಾರೆ. ಪರಿಣಾಮ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ನಾನು ಗೆದ್ದಿದ್ದೇನೆ. ಈ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮ ಹಾಕುತ್ತೇನೆ ಎಂದು ತಿಳಿಸಿದರು.ಸಂಘಟನೆ ಶಕ್ತಿಯಿಂದ ಗೆದ್ದಿದ್ದೇನೆ:

ಚುನಾವಣೆ ಕ್ಷೇತ್ರದಲ್ಲಿ ಬಂದ ಎಲ್ಲ ಅಪಪ್ರಚಾರಕ್ಕೆ ಮತದಾರರು ಸ್ಪಷ್ಟ ಉತ್ತರ ಕೊಟ್ಟು, ದೇಶದ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ನನ್ನನ್ನು ಜಿಲ್ಲೆಯ ಜನರು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ. ನಾನು ಜೀವನ ಪೂರ್ತಿ ಜನರ ಸೇವೆ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ. ಶಿವಮೊಗ್ಗದ ಬಿಜೆಪಿ ಸಂಘಟನೆ ಶಕ್ತಿಯಿಂದ ನಾನು ಗೆದ್ದಿದ್ದೇನೆ. ಎಲ್ಲಿಯೂ ಕೂಡ ಹಿನ್ನಡೆಯಾಗದೆ ಆರಂಭದಲ್ಲಿ ಟೇಕಾಫ್‌ ಆದ ರೀತಿಯಲ್ಲೇ ಒಳ್ಳೆ ಕಡೆ ಲ್ಯಾಂಡ್‌ ಮಾಡಿದ್ದಾರೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಶ್ರಮಕ್ಕೆ ನಾನು ಋಣಿ ಎಂದು ತಿಳಿಸಿದರು. ನಾಮಪತ್ರದ ಸಂದರ್ಭದಿಂದ ಹಿಡಿದು ಮತದಾನದವರೆಗೆ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪಕ್ಷದ ಜಿಲ್ಲಾ ನಾಯಕರು ನನ್ನ ಗೆಲುವಿಗೆ ಹೆಚ್ಚಿನ ಶ್ರಮ ಹಾಕಿದ್ದರು. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದರು.ಮಲೆನಾಡಿನ ಪರಿಸರ ಉಳಿಸಿ ಅಭಿವೃದ್ಧಿ

ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡಿನ ಪರಿಸರ ಉಳಿಸಿಕೊಂಡು ಅಭಿವೃದ್ಧಿಯಾಗಬೇಕಿದೆ. ಜೊತೆಗೆ ಜಿಲ್ಲೆಯ ಯುವಕರಲ್ಲಿ ಮಾದಕ ವಸ್ತು ಯಾವ ರೀತಿ ಪರಿಣಾಮ ಬೀರಿದೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನದಲ್ಲಿ ಜಿಲ್ಲೆಗೆ ಯಾವುದೇ ರೀತಿ ಮಾದಕ ವಸ್ತುಗಳು ಜಿಲ್ಲೆಗೆ ಬರಬಾರದು. ಆ ನಿಟ್ಟಿನಲ್ಲಿ ಯುವಕರ ಆರೋಗ್ಯಕ್ಕೆ ಆದ್ಯತೆ ಕೊಟ್ಟು ಏನು ಕೆಲಸ ಆಗಬೇಕು ಎಲ್ಲವನ್ನೂ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

ಬಿ.ವೈ.ರಾಘವೇಂದ್ರ, ವಿಜೇತ ಅಭ್ಯರ್ಥಿ