ಸಾರಾಂಶ
ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾನುವಾರ ಭರ್ಜರಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾನುವಾರ ಭರ್ಜರಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸಮಾವೇಶಗೊಂಡ ಬಿಜೆಪಿಯ ನೂರಾರು ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಪರ ವಿವಿಧ ಜಯಘೋಷಣೆಗಳನ್ನು ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ತಮ್ಮ ಕಾರ್ಯಕರ್ತರ ಜತೆ ಖುದ್ದು ಪಟಾಕಿ ಸಿಡಿಸುವ ಮೂಲಕ ವಿಶೇಷ ಗಮನ ಸೆಳೆದರು.
ನಂತರ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸೆಮಿಫೈನಲ್ ಎಂದು ಕರೆಸಿಕೊಳ್ಳುವ ಪಂಚರಾಜ್ಯಗಳ ಚುನಾವಣೆಯನ್ನು ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಸಾಧನೆ ಮಾಡಿದೆ. ಕರ್ನಾಟಕದಲ್ಲಿ ಜನರಿಗೆ ಗ್ಯಾರಂಟಿ ಆಮೀಷ ಒಡ್ಡಿರುವ ಕಾಂಗ್ರೆಸ್ ಮೂರು ರಾಜ್ಯದಲ್ಲಿ ಮಣ್ಣು ಮುಕ್ಕುವ ಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು.ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಮುಖಂಡರಾದ ಗೋವಿಂದ ಜೋಶಿ, ಪ್ರಭು ನವಲಗುಂದಮಠ, ಸಂತೋಷ ಚೌಹ್ವಾಣ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಮಂಜುನಾಥ ವರ್ಣೇಕರ ಭಾಗವಹಿಸಿದ್ದರು.