ಸಾರಾಂಶ
ವಿಡಿಯೋ ಮಾಡಿರುವ ಪ್ರೀತಂ ಮೋಸಗಾರ । ಹಣ ಕಳೆದುಕೊಂಡು ಅಳಲು
ಕನ್ನಡಪ್ರಭ ವಾರ್ತೆ ಹಾಸನಪ್ರೀತಂ ಎಂಬ ವ್ಯಕ್ತಿ ಸಕಲೇಶಪುರದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಅವರ ವಿರುದ್ಧ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಅಪಪ್ರಚಾರ ಮಾಡುತ್ತಿದ್ದು, ಇದೆಲ್ಲಾ ಸತ್ಯಕ್ಕೆ ದೂರವಾಗಿದೆ ಎಂದು ಸಕಲೇಶಪುರದ ರೆಸಾರ್ಟ್ ಮಾಲೀಕ ವೆಂಕಟೇಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ನಾನು ದೈಹಿಕವಾಗಿ ಆಶಕ್ತವಾಗಿದ್ದು, ವಿಕಲಚೇತನನಾಗಿರುತ್ತೇನೆ. ನನ್ನ ಜೊತೆ ಆತ್ಮೀಯವಾಗಿದ್ದ ಪ್ರೀತಂ ನನಗೆ ಬ್ಲಾಕ್ ಮೇಲ್ ಮಾಡಿ ನನ್ನಿಂದ ಲಕ್ಷಾಂತರ ರುಪಾಯಿ ವಸೂಲಿ ಮಾಡಿರುತ್ತಾನೆ. ಈ ಘಟನೆಯಿಂದ ನಾನು ಬಹಳಷ್ಟು ಹತಾಶನಾಗಿದ್ದೇನೆ. ದೈಹಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳು ವ್ಯವಹಾರ ಮಾಡುವುದು ಕಷ್ಟವಾಗಿದ್ದು, ಇಂತಹ ವ್ಯಕ್ತಿಗಳು ನಮ್ಮನ್ನು ಹೆದರಿಸಿ, ಬೆದರಿಸಿ ಹಣ ದೋಚುವುದಲ್ಲದೆ ನಮ್ಮ ಪರವಾಗಿ ನಿಂತು ನ್ಯಾಯಕ್ಕಾಗಿ ಮಾತನಾಡುವ, ನ್ಯಾಯ ಹೇಳುವ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಮಾಡಿದರೆ, ದುರ್ಬಲರು, ಅಶಕ್ತರು ವ್ಯವಹಾರ ಮಾಡುವುದಾದರೂ ಹೇಗೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.‘ಮುರಳಿ ಮೋಹನ್ ಪಂಚಾಯಿತಿ ನಡೆಸಿ ನನಗೆ ಉಪಕಾರ ಮಾಡಿದ್ದಾರೆ. ಅಸಹಾಯಕನಾಗಿದ್ದ ನನಗೆ ಸಹಾಯ ಮಾಡಿದ ವ್ಯಕ್ತಿಯ ಬಗ್ಗೆ ವಿಡಿಯೋ ಮಾಡಿ ಅವರ ವರ್ಚಸ್ಸಿಗೆ ಕುಂದು ತರುತ್ತಿರುವುದು ನನಗೆ ಬಹಳ ನೋವು ತಂದಿದೆ. ಇವರ ಬಗ್ಗೆ ಇಲ್ಲಸಲ್ಲದ ಶುದ್ಧ ಸುಳ್ಳು ವಿಚಾರವನ್ನು ವಿಡಿಯೋ ಮುಖಾಂತರ ಬಿತ್ತರಿಸಿ ಅವರ ತೇಜೋವಧೆ ಮಾಡಲು ಪ್ರೀತಂ ಮುಂದಾಗಿದ್ದಾನೆ. ನನಗೆ ಪ್ರೀತಂ, ಹಾನುಬಾಳು ಸಮೀಪ ರೆಸಾರ್ಟ್ ಒಂದನ್ನು ಖರೀದಿಸುವ ಸಂದರ್ಭದಲ್ಲಿ ಪರಿಚಯವಾಗಿದ್ದ, ನನಗೂ ಮುರಳಿ ರವರಿಗೆ ಪರಿಚಯವಿರಲಿಲ್ಲ. ಇವರ ಹೆಸರು ಮಾತ್ರ ಕೇಳಿದ್ದೆ, ಇದೇ ಪ್ರೀತಂ ನನಗೂ ಮತ್ತು ಮುರಳಿಯವರಿಗೆ ಪರಿಚಯ ಮಾಡಿಸಿದ್ದನು. ಪ್ರೀತಂ ನನ್ನ ಜೊತೆಯಲ್ಲೇ ಇದ್ದು ನನಗೆ ಮೋಸ ಮಾಡಿದ್ದಾನೆ. ನಾನು ನಡೆಸುತ್ತಿರುವ ರೆಸಾರ್ಟ್ ಬಗ್ಗೆ ಪೊಲೀಸರಿಗೆ, ತಹಸೀಲ್ದಾರ್ ಅವರಿಗೆ ಫೋನ್ ಮೂಲಕ ಸುಳ್ಳು ದೂರು ನೀಡುತ್ತಿದ್ದ. ನನ್ನ ಬಳಿ ೧೦ ಲಕ್ಷ ರುಪಾಯಿ ಪಡೆದುಕೊಂಡ. ನನ್ನ ಜೊತೆಯಲ್ಲಿ ಇದ್ದು ನನ್ನ ವ್ಯವಹರಕ್ಕೆ ಸಂಬಂಧಿಸಿದಂತಹ ಕೆಲವು ಅಂಶಗಳನ್ನು ತಿಳಿದುಕೊಂಡು ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದ’ ಎಂದು ದೂರದರು.
‘ಮುರಳಿ ಮೋಹನ್ ರವರ ನಿವಾಸದಲ್ಲಿ ಪಂಚಾಯಿತಿ ನಡೆಯಿತು. ನಂತರ ಪ್ರೀತಂ ನನ್ನ ಜತೆ ಚೆನ್ನಾಗಿದ್ದ. ಆದರೆ ಅವನ ಕೈಗೆ ನನ್ನಿಂದ ಲಕ್ಷಾಂತರ ಹಣ ಬಂದ ನಂತರ ಅವನ ವರ್ತನೆ ಬದಲಾದವು. ನನ್ನಿಂದ ಬಹಳಷ್ಟು ಹಣವನ್ನು ವಸೂಲಿ ಮಾಡಲು ಆರಂಭಿಸಿದ’ ಎಂದು ಆರೋಪಿಸಿದರು.‘ಪ್ರೀತಂ ವಿಡಿಯೋ ಮಾಡಿ ಮುರಳಿ ಮೋಹನ್ ಬಗ್ಗೆ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿದ್ದಾನೆ. ಇವೆಲ್ಲವೂ ಸುಳ್ಳಾಗಿವೆ. ನನ್ನ ಬಳಿ ಹಣ ಪಡೆದಿರುವ ಬಗ್ಗೆ ನನ್ನಲ್ಲಿ ಸಾಕ್ಷಿ ಸಹ ಇದೆ. ನಾನು ಆನ್‌ಲೈನ್ ಮೂಲಕ ಹಣ ನೀಡಿದ್ದೇನೆ. ಮುಂದೆಯೂ ಸಹ ಈತ ಇನ್ನೆಷ್ಟು ಸುಳ್ಳುಗಳನ್ನು ಹೇಳಬಹುದು ಎಂಬ ಕಾರಣಕ್ಕೆ ಸಮಾಜಕ್ಕೆ ಸತ್ಯ ತಿಳಿಯಲಿ ಎಂದು ಈ ಹೇಳಿಕೆ ನೀಡುತ್ತಿದ್ದೇನೆ. ನನಗೆ ಬ್ಲಾಕ್ ಮೇಲೆ ಮಾಡಿ ಹಣ ವಸೂಲಿ ಮಾಡಿರುವ ಸಂಬಂಧ ಪೊಲೀಸರಿಗೆ ದೂರು ನೀಡುತ್ತಿದ್ದೇನೆ’ ಎಂದು ಎಚ್ಚರಿಸಿದರು.
ಪ್ರದೀಪ್, ನಾಗೆಂದ್ರ, ಸುದೀಪ್ ಇತರರು ಇದ್ದರು.