ಸಾರಾಂಶ
ಬೆಂಗಳೂರು : ದೀಪಾವಳಿ ಪಟಾಕಿಗಳ ಸಾಗಣೆ, ಸಂಗ್ರಹ, ಮಾರಾಟದ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ‘ಕಣ್ಗಾವಲು ಸಮಿತಿ’ಯನ್ನು ರಚಿಸಲಾಗಿದೆ.
ಕಳೆದ ವರ್ಷ ನಗರ ಹೊರವಲಯದ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ ಸಂಭವಿಸಿ 14 ಜನ ಸಾವಿಗೀಡಾಗಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ, ಅನಾಹುತ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶುಕ್ರವಾರ ಸಭೆ ನಡೆಸಿದರು.
ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿ ತಹಸೀಲ್ದಾರ್ ಉಸ್ತುವಾರಿಯಲ್ಲಿ ಕಣ್ಗಾವಲು ಸಮಿತಿ ರಚಿಸಲಾಗುತ್ತದೆ. ಸಮಿತಿಯಲ್ಲಿ ಪುರಸಭೆ, ನಗರ ಸಭೆ, ಪಂಚಾಯಿತಿ, ಪೋಲಿಸ್, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ, ಕಂದಾಯ ಸೇರಿ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಇರುತ್ತಾರೆ. ಈ ಸಮಿತಿಯು ಪಟಾಕಿ ಮಾರಾಟ, ದಾಸ್ತಾನು, ಸಾಗಣೆ ಕುರಿತು ನಿರಂತರವಾಗಿ ವಿಶೇಷ ನಿಗಾ ಇರಿಸಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯುವವರು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಮಳಿಗೆಯಲ್ಲಿ ಸುರಕ್ಷತಾ ಕ್ರಮಗಳು, ತುರ್ತು ಸಂದರ್ಭ ಎದುರಿಸಲು ಮಾಡಿಕೊಂಡಿರುವ ವ್ಯವಸ್ಥೆಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ತೃಪ್ತಿಕರವಾಗಿದ್ದರೆ ಪರವಾನಗಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಪಟಾಕಿ ಗೋದಾಮುಗಳಿಗೆ ಅನುಮತಿ ನೀಡುವ ಮುನ್ನ ಪೋಲಿಸ್, ಅಗ್ನಿಶಾಮಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಲಿದ್ದಾರೆ. ಸುರಕ್ಷತಾ ಮಾರ್ಗಸೂಚಿ ಪಾಲಿಸುವ ಗೋದಾಮುಗಳ ಎದುರು ಅಗ್ನಿಶಾಮಕ ವಾಹನವನ್ನು ನಿಲ್ಲಿಸಲಾಗುತ್ತದೆ. ಸುರಕ್ಷತಾ ಕ್ರಮಗಳು ಪಾಲನೆ ಆಗದಿದ್ದರೆ ಗೋದಾಮುಗಳಲ್ಲಿ ಪಟಾಕಿ ಸ್ಟಾಕ್ ಮಾಡಲು ಅನುಮತಿ ನೀಡುವುದಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಯನ್ನು ಮಾರಾಟ ಮಾಡಲು ಮಾತ್ರ ಅನುಮತಿ ಇದೆ ಎಂದು ಜಗದೀಶ್ ತಿಳಿಸಿದ್ದಾರೆ.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ಉತ್ತರ ವಲಯ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ, ಆರೋಗ್ಯ, ಸ್ಥಳೀಯ ಸಂಸ್ಥೆಗಳು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅತ್ತಿಬೆಲೆಯಲ್ಲಿ ಚೆಕ್ ಪೋಸ್ಟ್
ರಾಜ್ಯಕ್ಕೆ ಪಟಾಕಿಗಳು ಬರುವ ಅತ್ತಿಬೆಲೆಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತದೆ. ಆರ್‌ಟಿಒ, ಪೊಲೀಸ್ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡಗಳು ದಿನದ 24 ತಾಸು ವಾಹನಗಳ ತಪಾಸಣೆ ನಡೆಸಲಿದ್ದಾರೆ.
ನಿಯಮ ಮೀರಿದರೆ ಕ್ರಮ
ಪಟಾಕಿ ಮಾರಾಟ ಮಳಿಗೆಯಲ್ಲಿ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿ ಪಟಾಕಿ ಸಾಗಣೆ, ಸಂಗ್ರಹ, ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಬೆಂಗಳೂರು ನಗರ.