ಮನೆಯಲ್ಲಿ ಅಕ್ರಮ ನಕಲಿ ಮದ್ಯ ತಯಾರಿಸಿದ್ದ ಪತಿ - ಪತಿ ಜೊತೆ ಇದ್ದ ಮಾತ್ರಕ್ಕೆ ಪತ್ನಿ ಆರೋಪಿ ಅಲ್ಲ

| Published : Nov 09 2024, 08:57 AM IST / Updated: Nov 09 2024, 09:27 AM IST

Karnataka highcourt
ಮನೆಯಲ್ಲಿ ಅಕ್ರಮ ನಕಲಿ ಮದ್ಯ ತಯಾರಿಸಿದ್ದ ಪತಿ - ಪತಿ ಜೊತೆ ಇದ್ದ ಮಾತ್ರಕ್ಕೆ ಪತ್ನಿ ಆರೋಪಿ ಅಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಪರಾಧ ಕೃತ್ಯದಲ್ಲಿ ಭಾಗಿಯಾದ ಪತಿಯೊಂದಿಗೆ ಒಂದೇ ಮನೆಯಲ್ಲಿ ನೆಲೆಸಿದ ಕಾರಣಕ್ಕೆ ಪತ್ನಿಯನ್ನು ಪ್ರಕರಣದಲ್ಲಿ ಸಹ ಆರೋಪಿಯನ್ನಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬೆಂಗಳೂರು : ಅಪರಾಧ ಕೃತ್ಯದಲ್ಲಿ ಭಾಗಿಯಾದ ಪತಿಯೊಂದಿಗೆ ಒಂದೇ ಮನೆಯಲ್ಲಿ ನೆಲೆಸಿದ ಕಾರಣಕ್ಕೆ ಪತ್ನಿಯನ್ನು ಪ್ರಕರಣದಲ್ಲಿ ಸಹ ಆರೋಪಿಯನ್ನಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ನಾರ್ಬರ್ಟ್ ಡಿಸೋಜಾ ಎಂಬಾತ ಮನೆಯ ಹಿತ್ತಲಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆತನ ಪತ್ನಿ ಶಾಂತಿ ರೋಚ್‌ನನ್ನು ಸಹ ಆರೋಪಿಯನ್ನಾಗಿ ಸೇರಿಸಲು ಆದೇಶಿಸಬೇಕು ಎಂದು ಕೋರಿ ಪ್ರಕರಣದ ದೂರುದಾರ ಆರ್‌.ಕೆ.ಭಟ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸ್ಪಷ್ಟನೆ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಆರೋಪಿ ನಾರ್ಬರ್ಟ್ ಡಿಸೋಜಾ ಜತೆಗೆ ಪತ್ನಿ ಶಾಂತಿ ರೋಚ್ ಒಂದೇ ಮನೆಯಲ್ಲಿ ನೆಲೆಸಿದ್ದರು. ಪತಿಯ ಅಕ್ರಮ ಮದ್ಯ ತಯಾರಿಕೆ ಹಾಗೂ ಮಾರಾಟದಲ್ಲಿ ನೆರವು ನೀಡಿದ್ದರು. ಪತಿಯ ಕೃತ್ಯದ ಬಗ್ಗೆ ಆಕೆಗೆ ಸಂಪೂರ್ಣ ಮಾಹಿತಿಯಿತ್ತು. ಹೀಗಾಗಿ, ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿಯೆಂದು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

ಈ ವಾದ ಒಪ್ಪದ ನ್ಯಾಯಪೀಠ, ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವುದ್ದಕ್ಕಾಗಿ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ. ಸುಖಾಸುಮ್ಮನೆ ಪತ್ನಿಯನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಲಾಗದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿ ನಾರ್ಬರ್ಟ್ ಡಿಸೋಜಾ ಎಂಬಾತ ತನ್ನ ಹಿತ್ತಲಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳ ಮಹಜರು ನಡೆಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ದೂರುದಾರನಾಗಿರುವ ಅರ್ಜಿದಾರ, ನಾರ್ಬರ್ಟ್ ಡಿಸೋಜಾ ಪತ್ನಿ ಶಾಂತಿ ರೋಚ್ ಕೂಡ ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಆಕೆಯನ್ನೂ ಸಹ ಆರೋಪಿಯನ್ನಾಗಿ ಕೋರಿ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾಗೊಂಡ ಕಾರಣಕ್ಕೆ ಭಟ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.