ಗುಮ್ಮಟ ನಗರಿ ಮುಂತಾದ ಹೆಸರುಗಳಿಂದ ಖ್ಯಾತವಾಗಿರುವ ವಿಜಯಪುರ ದಕ್ಷಿಣದ ಕಾಶಿ ಎಂದೇ ಹೆಸರಾಗಿತ್ತು. ಶರಣರ ನಾಡು, ಸೂಫಿ ಸಂತರ ಬೀಡು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜನ್ಮ ಮತ್ತು ಕರ್ಮಭೂಮಿಯಾದ ಈ ನೆಲ ಸದಾ ಬಾಂಧವ್ಯಕ್ಕೆ ಮಾದರಿಯಾಗಿದೆ. ಕನ್ನಡದ ಮೊದಲ ರಾಮಾಯಣವೂ ಕೃತಿ ಇಲ್ಲಿಯೇ ರಚಿತವಾಗಿದೆ ಎಂದು ಇತಿಹಾಸಕಾರ ಡಾ.ಆನಂದ ಜೆ. ಕುಲಕರ್ಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗುಮ್ಮಟ ನಗರಿ ಮುಂತಾದ ಹೆಸರುಗಳಿಂದ ಖ್ಯಾತವಾಗಿರುವ ವಿಜಯಪುರ ದಕ್ಷಿಣದ ಕಾಶಿ ಎಂದೇ ಹೆಸರಾಗಿತ್ತು. ಶರಣರ ನಾಡು, ಸೂಫಿ ಸಂತರ ಬೀಡು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜನ್ಮ ಮತ್ತು ಕರ್ಮಭೂಮಿಯಾದ ಈ ನೆಲ ಸದಾ ಬಾಂಧವ್ಯಕ್ಕೆ ಮಾದರಿಯಾಗಿದೆ. ಕನ್ನಡದ ಮೊದಲ ರಾಮಾಯಣವೂ ಕೃತಿ ಇಲ್ಲಿಯೇ ರಚಿತವಾಗಿದೆ ಎಂದು ಇತಿಹಾಸಕಾರ ಡಾ. ಆನಂದ ಜೆ. ಕುಲಕರ್ಣಿ ತಿಳಿಸಿದರು.

ವೃಕ್ಷಥಾನ್ ಹೆರಿಟೇಜ್ ರನ್-2025ರ ಮುನ್ನಾ ದಿನ ಶನಿವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾನಾ ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು. ಆದಿಲ್ ಶಾಹಿ ಅರಸರ ಸಂಸ್ಕೃತಿ ಕುರಿತು ವಿಚಾರ ಮಂಡಿಸಿದ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಆದಿಲ್ ಶಾಹಿ ಬಾದಷಾಹ ತಮ್ಮ ಆಡಳಿತದಲ್ಲಿ ಶೈಕ್ಷಣಿಕ, ಸಾಹಿತ್ಯ ಮತ್ತು ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಹತೆ ಆಧಾರದ ಮೇಲೆ ನಾಗರಿಕರಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ತಿಂಗಳ ಮೊದಲ ಗುರುವಾರ ನಡೆಯುತ್ತಿದ್ದ ಕಲೋತ್ಸವ, ನಾನಾ ಉದ್ಯಾನ, ಸಮಬಾಳು ಅವರ ತತ್ವವಾಗಿದ್ದವು ಎಂದು ಹೇಳಿದರು.

ಫಿಟ್ನೆಸ್ ತಜ್ಞ ಜಗದೀಶ ರಂಗಸ್ವಾಮಿ ಮಾತನಾಡಿ, ತಾವು ಈವರೆಗೆ 180 ದೇಶಗಳಿಗೆ ಭೇಟಿ ನೀಡಿದ್ದೇನೆ. ನಮ್ಮಲ್ಲಿ ಬಾಲ್ಯದಿಂದ ರೂಢಿಸಿಕೊಳ್ಳುವ ಹವ್ಯಾಸಗಳು ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಓಟ ಆರೋಗ್ಯದ ಒಂದು ಅವಿಭಾಜ್ಯ ಪ್ರಕ್ರಿಯೆಯಾಗಿದೆ. ವೃಕ್ಷಥಾನ್‌ನಂಥ ಹಾಫ್ ಮ್ಯಾರಾಥಾನ್‌ಗಳು ನಡೆಯುವುದರಿಂದ ಇತರರಿಗೂ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಶಸ್ತ್ರಚಿಕಿತ್ಸಕ ಡಾ.ರವಿ ಚೌಧರಿ ಮಾತನಾಡಿ, ಒಂದು ಕಾಲದಲ್ಲಿ ಪಂಚನದಿಗಳ ನಾಡಾಗಿದ್ದ ವಿಜಯಪುರ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಇಂಥ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ತನ್ನ ಗುರುತನ್ನು ಮರುಸ್ಥಾಪಿಸುತ್ತಿದೆ ಎಂದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ವಿಜಯಕುಮಾರ ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಾಚೀನ ಸ್ಮಾರಕಗಳ ಅಪಾರ ಸಂಪತ್ತು ಇದೆ. ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೈಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಅವರು ಕಾರ್ಯ ಒತ್ತಡದಲ್ಲಿ ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯ ಕಾಪಾಡುವ ಬಗೆ ಕುರಿತು ಮಾತನಾಡಿದರು. ಪ್ರತಿಯೊಂದನ್ನು ಎದುರಿಸಿ ಉದಯಿಸಬೇಕು. ಎಲ್ಲವನ್ನು ಮರೆತು ಓಡಬೇಕು. ನಾವು ಬಯಸಿದಂತೆ ಜೀವನದಲ್ಲಿ ಎಲ್ಲವೂ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಒತ್ತಡದಿಂದ ಹೊರ ಬಂದು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವೈದ್ಯ ಡಾ. ಶಂಕರಗೌಡ ಪಾಟೀಲ ಮಾತನಾಡಿ, ಪ್ರತಿನಿತ್ಯದ ಆರೋಗ್ಯದಲ್ಲಿ ನಿಯಮಿತ ಆಹಾರ ಸೇವನೆ ಮತ್ತು ದೈಹಿಕ ಕಸರತ್ತು ಮುಖ್ಯವಾಗಿದ್ದು, ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮುಖಂಡ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಆರೋಗ್ಯ ಮತ್ತು ಶಿಸ್ತು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಳ ಮತ್ತು ಹೊರ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ನಮಗೆ ನೈಸರ್ಗಿಕವಾಗಿ ಸಿಗುವ ಮಳೆ, ಗಾಳಿ, ಬೆಳಕು ಸೇರಿದಂತೆ ಪಂಚ ಮಹಾಭೂತಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಪರಿಸರ ಸಂರಕ್ಷಕ ಬಸವರಾಜ ಬೈಚಬಾಳ ಅವರು ನಗರದಲ್ಲಿ ಮನೆಗೊಂದು ಮರ, ಬಡಾವಣೆಗಳಲ್ಲಿ ಒಂದು ಉದ್ಯಾನ ಕುರಿತು ಮಾತನಾಡಿದರು. ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ಡಾ.ಪ್ರಶಾಂತ ಪಿ.ಕೆ.ಎಂ ಅವರು ರಾಜ್ಯದ ಅರಣ್ಯ ಸ್ಥಿತಿಗತಿ, ವಿಜಯಪುರ ಜಿಲ್ಲೆಯಲ್ಲಿ ಅರಣ್ಯೀಕರಣ, ಮುಂದೆ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ಮಾತನಾಡಿದರು. ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಅವರು ಸುಂದರ ಪರಿಸರ- ಸುಂದರ ಮನಸ್ಸು ಕುರಿತು ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ವಹಿಸಬೇಕು. ಭೂಮಿ ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ ಎಂದು ಹೇಳಿದರು. ನಿವೃತ್ತ ಭದ್ರತಾ ಅಧಿಕಾರಿ ಎಸ್. ಹರಿನಾಥ ಅವರು ಒಟದಿಂದ ವ್ಯಕ್ತಿಯಲ್ಲಾಗುವ ಬದಲಾವಣೆ ಕುರಿತು ಮಾತನಾಡಿದರೆ, ಕಲಬುರಗಿ ಅಬಕಾರಿ ಇಲಾಖೆ ಉಪಾಯುಕ್ತ ಡಾ. ಸಂಗನಗೌಡ ಅವರು ಕ್ರೀಡೆಯಿಂದ ನಿತ್ಯ ಜೀವನದಲ್ಲಿ ಆಗುವ ಲಾಭದ ಕುರಿತು ಮಾತನಾಡಿದರು.

ಸ್ಮಾರಕಗಳ ಸಂರಕ್ಷಣೆ ಮುಖಂಡ ಅಮೀನುದ್ದೀನ್ ಹುಲ್ಲೂರ, ಉದ್ಯಮಿ ಅನುಪಮ ರುಣವಾಲ, ಪ್ರಾಧ್ಯಾಪಕಿ ಪ್ರೊ. ಅನುರಾಧಾ ಟಂಕಸಾಲಿ ಮತ್ತು ಉದ್ಯಮಿ ಶಾಂತೇಶ ಕಳಸಗೊಂಡ ನಾಲ್ಕು ಗೋಷ್ಠಿಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.

ಇದೇ ವೇಳೆ ಚಿತ್ರಕಲೆ, ನಿಬಂಧ, ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.