ಸಾರಾಂಶ
ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬರುವುದು ವಿಳಂಬವಾಗಿದ್ದಕ್ಕೆ ಮೂವರು ಕೂಲಿ ಕಾರ್ಮಿಕರನ್ನು ಆಮಾನವೀಯವಾಗಿ ಥಳಿಸಿರುವ ಘಟನೆ ವಿಜಯಪುರ ಹೊರವಲಯದ ಗಾಂಧಿ ನಗರದ ಇಟ್ಟಿಗೆ (ಇಟ್ಟಂಗಿ) ಭಟ್ಟಿಯಲ್ಲಿ ಜ.16ರಂದು ನಡೆದಿದು ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬರುವುದು ವಿಳಂಬವಾಗಿದ್ದಕ್ಕೆ ಮೂವರು ಕೂಲಿ ಕಾರ್ಮಿಕರನ್ನು ಆಮಾನವೀಯವಾಗಿ ಥಳಿಸಿರುವ ಘಟನೆ ವಿಜಯಪುರ ಹೊರವಲಯದ ಗಾಂಧಿ ನಗರದ ಇಟ್ಟಿಗೆ (ಇಟ್ಟಂಗಿ) ಭಟ್ಟಿಯಲ್ಲಿ ಜ.16ರಂದು ನಡೆದಿದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಗಾಯಗೊಂಡಿರುವ ಮೂವರು ಕಾರ್ಮಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ, ರೋಹನ್ ಖೇಮು ರಾಠೋಡ ಮತ್ತು ಕನಕಮೂರ್ತಿ ಗೋಂಧಳಿ, ಸಚಿನ ಮಾನವರ, ವಿಶಾಲ ಜುಮನಾಳ ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿ ನಗರದಲ್ಲಿರುವ ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ ಹಾಗೂ ಆತನ ಬೆಂಬಲಿಗರು ಕಾರ್ಮಿಕರ ಕಾಲುಗಳನ್ನು ಕಟ್ಟಿಹಾಕಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕ್ರೂರವಾಗಿ ಹಲ್ಲೆ ಮಾಡುವ ದೃಶ್ಯ ವೈರಲ್ ಆಗಿದ್ದು ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಕಾರ್ಮಿಕರನ್ನು ಹಿಡಿದು ಪೈಪುಗಳಿಂದ ಮನಬಂದಂತೆ ಥಳಿಸಿದ್ದನ್ನು ವಿಡಿಯೋ ಮಾಡಿರುವ ಕಾರ್ಮಿಕರು ಮಾಲೀಕನ ದರ್ಪವನ್ನು ತೋರಿಸಲೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಏನಿದು ಘಟನೆ?:
ಕಳೆದ ಹಲವು ತಿಂಗಳಿನಿಂದ ಗಾಂಧಿ ನಗರದ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಜಮಖಂಡಿ ತಾಲೂಕಿನ ಚಿಕ್ಕಲಕಿ ಯ ಮೂವರು ಕಾರ್ಮಿಕರಾದ ಉಮೇಶ ಮಾದರ, ಸದಾಶಿವ ಮಾದರ, ಸದಾಶಿವ ಬಬಲಾದಿ ಎಂಬುವರು ಜನವರಿ ಮೊದಲವಾರದಲ್ಲಿ ಸಂಕ್ರಾಂತಿ ಜಾತ್ರೆಗೆಂದು ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು. ಆದರೆ, ಕಾರ್ಮಿಕರು ವಾಪಸ್ ಜ.16ರಂದು ಬಂದಾಗ ಇಷ್ಟೊಂದು ದಿನ ಯಾಕೆ ಊರಿಗೆ ಹೋಗಿದ್ದೀರಿ ಎಂದು ಕುಪಿತಗೊಂಡ ಮಾಲೀಕ ಈ ಮೂವರನ್ನು ಮೂರು ದಿನಗಳ ಕಾಲ ಕೂಡಿ ಹಾಕಿದ್ದಾನೆ. ಮಾತ್ರವಲ್ಲ. ಮಾಲೀಕ ಹಾಗೂ ಆತನ ಬೆಂಬಲಿಗರು ಸೇರಿ ನಿರಂತರವಾಗಿ ಕಾರ್ಮಿಕರನ್ನು ಮನಬಂದಂತೆ ಥಳಿಸಿದ್ದಾರೆ. ಕಾರ್ಮಿಕರು ಬೇಡಿಕೊಂಡರು ಬಿಡದೇ ಮನ ಸೋಇಚ್ಛೆ ಹೊಡೆದಿದ್ದಾರೆ. ಇದೀಗ ಥಳಿತಕ್ಕೊಳಗಾದ ಕಾರ್ಮಿಕರು ಗಾಯಗೊಂಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಡಿಯೋ ವೈರಲ್ ಮೂಲಕ ಹೊರಬಂದ ಕೇಸ್:
ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ ಹಾಗೂ ಆತನ ಬೆಂಬಲಿಗರೆಲ್ಲ ಸೇರಿ ಹಲ್ಲೆ ಮಾಡಿದ ವಿಡಿಯೋವನ್ನು ಕಾರ್ಮಿಕರೇ ವೈರಲ್ ಮಾಡಿದ್ದಾರೆ. ಇಂತಹ ಭಯಾನಕ ವಿಡಿಯೋ ಉಳಿದ ಕಾರ್ಮಿಕರಿಗೆಲ್ಲ ಭಯ ಹುಟ್ಟಿಸಿದೆ. ಕಾರ್ಮಿಕರನ್ನು ಕಟ್ಟಿಹಾಕಿ, ಅವರ ಕಾಲುಗಳ ಮೇಲೆ ನಿಂತು, ಪಾದಗಳಿಗೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹಲ್ಲೆಯ ವೇಳೆ ಕಾರ್ಮಿಕರು ಕೈ ಮುಗಿದು ಕಣ್ಣೀರಿಟ್ಟು ಬಿಟ್ಟು ಬಿಡುವಂತೆ ಗೋಗರೆದರೂ ದುರುಳರು ಅವರನ್ನು ಬಿಡದೆ ಹಲ್ಲೆ ನಡೆಸಿ ಕ್ರೂರವಾಗಿ ನಡೆದುಕೊಂಡಿದ್ದಾರೆ.
ಐವರು ಆರೋಪಿಗಳ ಸೆರೆ:
ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದಂತೆಯೇ ಎಚ್ಚೆತ್ತ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತ ಘಟನೆ ಬಳಿಕ ಖೇಮು ರಾಠೋಡ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನುಳಿದ ಕಾರ್ಮಿಕರು ವಾಪಸ್ ತೆರಳಿದ್ದಾರೆ. ಇಡೀ ಕಾರ್ಖಾನೆ ಖಾಲಿ ಖಾಲಿಯಾಗಿದೆ. ಕೆಲಸಕ್ಕೆ ಬರೋದು ವಿಳಂಬ ಕಾರಣದಿಂದಾಗಿ ಈ ರೀತಿ ಹಲ್ಲೆ ಮಾಡಿದ್ದರಿಂದ ಉಳಿದ ಕಾರ್ಮಿಕರನ್ನು ಭಯ ಬೀಳಿಸಿದೆ. ಹಾಗಾಗಿ ಅವರು ಕೂಡ ಕಾರ್ಖಾನೆ ತೊರೆದಿದ್ದಾರೆ.
ಖೇಮು ರಾಠೋಡ ಎಂಬ ಮಾಲೀಕ ಹಾಗೂ ಆತನ ಏಳೆಂಟು ಜನ ಬಂಬಲಿಗರು ಕಣ್ಣಲ್ಲಿ ಖಾರದಪುಡಿ ಹಾಕಿ, ನೀರು ಸುರಿದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆ ಎಂದು ರಿವಾಲ್ವಾರ್ತೋರಿಸಿ ಬೆದರಿಕೆ ಕೂಡ ಹಾಕಿದ್ದಾರೆ. ನಾವು ಕೂಲಿಯಂತೆ ಅವರ ಬಳಿ ಕೆಲಸ ಮಾಡುತ್ತಿದ್ದು, ನಮ್ಮ ಮೇಲೆ ಈ ರೀತಿ ದೌರ್ಜನ್ಯ ಮಾಡಿ, ಸಾಕಷ್ಟು ಹಿಂಸೆ ಕೊಟ್ಟಿದ್ದಾರೆ ಎಂದು ಹಲ್ಲೆಗೊಳಗಾದ ಕಾರ್ಮಿಕ ಸದಾಶಿವ ಮಾದರ ತಿಳಿಸಿದ್ದಾರೆ.