ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಹಾಗೂ ಕ್ರಿಯಾಶೀಲ ಸಂಘಟಕರಾದ ಕೆ.ವಿ. ವಿಕ್ರಮರಾವ್ ಅವರಿಗೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರದಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಒಂದು ನಿಮಿಷ ಮೌನ ಆಚರಿಸುವುದರ ಮೂಲಕ ಅರ್ಥಪೂರ್ಣವಾಗಿ ಶ್ರದ್ಧಾಂಜಲಿ ಅರ್ಪಿಸಿದರು.ಇದೇ ವೇಳೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಎಚ್.ಪಿ. ಮದನ್ ಗೌಡ ಮಾತನಾಡಿ, ಪತ್ರಕರ್ತರ ಸಂಘಟಕರಾದ ಕೆ.ವಿ. ವಿಕ್ರಮರಾವ್ ಅವರ ನಿಧನ ಪತ್ರಕರ್ತರ ರಂಗಕ್ಕೆ ಭಾರಿ ನಷ್ಟವಾಗಿದೆ. ಪಕ್ಕದ ದೇಶಗಳಲ್ಲಿ ಕೂಡ ಬಾಂಧವ್ಯ ಹೊಂದಿದ್ದರು. ಕೇಂದ್ರ ಸರ್ಕಾರ ಇವರ ಮಾತಿಗೆ ಮಾನ್ಯತೆ ಕೊಡುತಿತ್ತು. ನನಗೆ ವಿಕ್ರಮ್ ಜೊತೆ ಹೆಚ್ಚಿನ ಒಡನಾಟವಿತ್ತು. ಇಡೀ ದೇಶಾದ್ಯಂತ ವಿವಿಧ ಜಾಗಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಇಡೀ ದೇಶದ ಪತ್ರಕರ್ತರನ್ನು ಒಂದು ಕುಟುಂಬ ಎಂದುಕೊಂಡಿದ್ದರು. ವಿಕ್ರಮ್ ಅವರ ಅವಧಿಯಲ್ಲಿ ಬೆಳಗೊಳದಲ್ಲಿ ಎರಡು ಸಮ್ಮೇಳನ ಆಗಿದೆ. ಪತ್ರಕರ್ತರಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದವರು ಎಂದು ನೆನಪಿಸಿಕೊಂಡರು. ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ ಮಾತನಾಡಿ, ವಿಕ್ರಮ್ ಅವರು ಧೀಮಂತ ವ್ಯಕ್ತಿತ್ವ ಹೊಂದಿದ್ದರು. ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಹೆಚ್ಚು ಗೌರವ ಕೊಡುತ್ತಿದ್ದರು. ನಾಯಕತ್ವದ ಗುಣ ಹೊಂದಿದ್ದ ಅವರು ಎಲ್ಲಾರನ್ನು ಗೌರವಿಸುತ್ತಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಸಂಘಟಿಸಿದ್ದರು. ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ. ಆರ್. ಉದಯಕುಮಾರ್ ಮಾತನಾಡಿ, ವಿಕ್ರಂ ಅವರ ಬರಹದಲ್ಲಿ ಭಾಷೆ ಮೇಲೆ ಹಿಡಿತ ಹೊಂದಿದ್ದರು. ಇತ್ತೀಚಿನ ಕೆಲ ಘಟನೆ ಅವರಿಗೆ ಆತಂಕ ಉಂಟು ಮಾಡಿತ್ತು. ಎಲ್ಲರಿಗೂ ಗೌರವ ಕೊಡುತ್ತಿದ್ದರು. ಶ್ವಾಸಕೋಶ ಸಮಸ್ಯೆ ಆಗಿ ಕೊನೆಯುಸಿರೆಳೆದಿದ್ದಾರೆ. ಅವರ ಈ ಸಾವು ಬೇಸರ ತಂದಿದೆ ಎಂದು ಹೇಳಿದರು.ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಮಂಜುನಾಥ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.