ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಸರ್ಕಾರದ ಆಡಳಿತ ಯಂತ್ರವನ್ನು ಜನರ ಬಳಿ ತೆಗೆದುಕೊಂಡು ಹೋಗಲು ಎಲ್ಲಾ ಕಡೆ ಜನತಾ ದರ್ಶವನ್ನು ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಹಾಗೂ ಗ್ರಾಮಗಳಲ್ಲಿ ಕಾರ‍್ಯನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳು ಮಾತ್ರ ತಮ್ಮ ತಮ್ಮ ಕಂದಾಯ ವೃತ್ತಗಳನ್ನು ಬಿಟ್ಟು ಹೋಬಳಿ ಇಲ್ಲವೆ ತಾಲೂಕು ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿರುವ ಪರಿಣಾಮ ಗ್ರಾಮೀಣರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆಯುವಂತಾಗಿದೆ.
ಸರ್ಕಾರ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಗ್ರಾಮ ವಾಸ್ತವ್ಯ ಯೋಜನೆ ಯೋಜನೆ ಜಾರಿಗೊಳಿಸಿತ್ತು.ಕಂದಾಯ ವೃತ್ತಗಳಲ್ಲಿ ಕಚೇರಿ ಇಲ್ಲ:
ಎಲ್ಲ ಹೋಬಳಿಗಳ ವ್ಯಾಪ್ತಿಗೆ ಒಳಪಡುವ ಕಂದಾಯ ವೃತ್ತಗಳನ್ನು ಆರಂಭಿಸಿ ಗ್ರಾಮಗಳಲ್ಲೆ ಗ್ರಾಮ ಲೆಕ್ಕಿಗರು ಕಚೇರಿ ತೆರೆದು ನಿತ್ಯ ಗ್ರಾಮೀಣರ ಕೆಲಸಗಳನ್ನು ಅಲ್ಲೆ ಮಾಡಿಕೊಡಬೇಕೆಂದು ಸೂಚಿಸಿದೆ. ಆದರೆ ಯಾವ ಕಂದಾಯ ವೃತ್ತಗಳಲ್ಲಿ ಗ್ರಾಮ ಲೆಕ್ಕಿಗರ ಕಚೇರಿಯನ್ನು ತೆರೆದಿಲ್ಲ, ಬದಲಾಗಿ ಹೋಬಳಿ ಕೇಂದ್ರಗಳಲ್ಲೆ ಠಿಕಾಣಿ ಹೂಡುವರು ಇಲ್ಲವೆ ತಾಲೂಕು ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವುದು ಸಾಮಾನ್ಯವಾಗಿದೆ.ತಾಲೂಕಿನ ಗಡಿ ಭಾಗವಾದ ದೋಣಿಮಡಗು, ಬತ್ತಲಹಳ್ಳಿ, ಬೋಡಗುರ್ಕಿ, ಗುಲ್ಲಹಳ್ಳಿ,ಬಲಮಂದೆ, ತೊಪ್ಪನಹಳ್ಳಿ, ತಮಟಮಾಕನಹಳ್ಳಿ ಮತ್ತಿತರೆ ಕಂದಾಯ ವೃತ್ತದ ಜನರು ಕೇಂದ್ರ ಸ್ಥಾನದಲ್ಲಿ ಗ್ರಾಮ ಲೆಕ್ಕಿಗರ ಕಚೇರಿ ಇಲ್ಲದೆ ಹತ್ತಾರು ಕಿ.ಮೀ ಕ್ರಮಿಸಬೇಕಾಗಿದ್ದರೆ, ಕಸಭಾ ಹೋಬಳಿಯ ಲೆಕ್ಕಾಧಿಕಾರಿಗಳು ಪಟ್ಟಣದಲ್ಲಿ ಖಾಸಗಿ ರೂಂಗಳನ್ನು ಬಾಡಿಗೆಗೆ ಪಡೆದು ಅಲ್ಲೆ ಕಚೇರಿಗಳಾಗಿ ಮಾರ್ಪಡಿಸಿಕೊಂಡಿದ್ದು, ಕಸಭಾ ಹೋಬಳಿಯ ಜನರು ತಮ್ಮ ಗ್ರಾಮ ಲೆಕ್ಕಿಗರನ್ನು ಹುಡುಕಿಕೊಂಡು ಪಟ್ಟಣಕ್ಕೆ ಬರಬೇಕಿದೆ.
ಗ್ರಾಪಂಗಳಲ್ಲಿ ಕಚೇರಿ ತೆರೆದಿಲ್ಲ:ಬಹುತೇಕ ಸಂದರ್ಭದಲ್ಲಿ ಕಾಮಸಮುದ್ರ, ಬೂದಿಕೋಟೆ, ಕಸಭಾ ಹೋಬಳಿಯ ಗ್ರಾಮ ಲೆಕ್ಕಿಗರು ಪಟ್ಟಣದಲ್ಲಿ ಲಭ್ಯವಿರುತ್ತಾರೆಯೇ ಹೊರತು ಕೇಂದ್ರ ಸ್ಥಾನದಲ್ಲಿ ಸಿಗುವುದು ಅಪರೂಪ. ವೃತ್ತಗಳಲ್ಲಿ ಕಚೇರಿ ತೆರೆಯಲು ಅನುಕೂಲವಿಲ್ಲದಿರುವಾಗ ಗ್ರಾಪಂ ಕಚೇರಿಯಲ್ಲೆ ಕಚೇರಿ ತೆರೆಯಬಹುದು ಎಂದು ಸರ್ಕಾರ ಆದೇಶವಿದ್ದರೂ ಯಾವ ಗ್ರಾಪಂನಲ್ಲಿಯೂ ಗ್ರಾಮ ಲೆಕ್ಕಿಗರ ನಾಮಫಲಕವಿಲ್ಲ.
ಗ್ರಾಮ ಲೆಕ್ಕಿಗರ ವಾಸ್ತವಾಂಶದ ಬಗ್ಗೆ ತಹಸೀಲ್ದಾರ್ ರವರ ಗಮನಕ್ಕೆ ಬಂದಿದ್ದರೂ ಅವರು ಕ್ರಮ ಕೈಗೊಳ್ಳದೆ ಕಡೆಗಣಿಸಿರುವುದರಿಂದ ಸರ್ಕಾರದ ಆದೇಶ ಗಾಳಿಗೆ ತೂರಿದಂತಾಗಿದೆ.