ಕೆರೆ ಅಭಿವೃದ್ಧಿಯಿಂದ ಗ್ರಾಮ ಅಭಿವೃದ್ಧಿ

| Published : May 14 2024, 01:03 AM IST

ಸಾರಾಂಶ

ಗ್ರಾಮೀಣ ಭಾಗದ ಕೆರೆಗಳ ಹೂಳೆತ್ತುವುದರಿಂದ ಅಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿರುವ ಕಾರ್ಯ ಶ್ಲಾಘನೀಯ

ಲಕ್ಷ್ಮೇಶ್ವರ: ಕೆರೆ, ನದಿಗಳ ಪಕ್ಕದಲ್ಲಿ ನಮ್ಮ ಪೂರ್ವಜರು ತಮ್ಮ ನೆಲೆ ನಿರ್ಮಿಸಿಕೊಳ್ಳುವ ಮೂಲಕ ಬದುಕು ರೂಪಿಸಿಕೊಳ್ಳುವ ಕಾರ್ಯ ಮಾಡಿದರು. ನೀರು ಮನುಷ್ಯನ ಬದುಕಿಗೆ ಅವಶ್ಯವಾಗಿರುವುದರಿಂದ ಅವುಗಳ ಪುನರುಜ್ಜೀವನ ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರ ಕೆರೆ ನಮ್ಮೂರ ಹೆಮ್ಮೆ ಯೋಜನೆಯಡಿಯಲ್ಲಿ ಸಮೀಪದ ರಾಮಗೇರಿ ಗ್ರಾಪಂ ವ್ಯಾಪ್ತಿಯ ಬಸಾಪೂರ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕಿನಲ್ಲಿನ ಗ್ರಾಮೀಣ ಭಾಗದ ಕೆರೆಗಳ ಹೂಳೆತ್ತುವುದರಿಂದ ಅಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಕೆರೆಗಳು ನಮ್ಮ ಒಡನಾಡಿಗಳಾಗಿವೆ. ಕೆರೆಯಲ್ಲಿ ನೀರು ನಿಂತು ಅಂತರ್ಲಜ ಹೆಚ್ಚುವುದರಿಂದ ಕೊಳವೆಬಾವಿಗೆ ಯಥೇಚ್ಛವಾಗಿ ನೀರು ಸಿಗುತ್ತದೆ. ಇದರಿಂದ ರೈತರು ನೀರಾವರಿ ಬೆಳೆ ಬೆಳೆಯಲು ಅವಕಾಶ ಸಿಗುವುದರಿಂದ ರೈತರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಗ್ರಾಪಂ ಉಪಾಧ್ಯಕ್ಷೆ ಈರಮ್ಮ ಮಡಿವಾಳರ, ಅಶೋಕ ಕಾಳಿ, ಯಲ್ಲಪ್ಪ ಬೆಟಗೇರಿ, ರೇಣವ್ವ ಲಕ್ಕಣ್ಣವರ, ಕವಿತಾ ಯಂಗಾಡಿ, ಅನ್ನಪೂರ್ಣ ಪೂಜಾರ, ಜಗದೀಶ ಕುರುಬರ, ಚಿದಾನಂದ ಮಲ್ಲೂರು, ಅಣ್ಣಪ್ಪ ವಾಲ್ಮೀಕಿ, ಕಮಲವ್ವ ತುಂಬುತ್ತಿರುವ, ಜಗದೀಶ ಜಾವೂರ ಸೇರಿದಂತೆ ಗುರು ಹಿರಿಯರು ತಾಪಂ ಮಾಜಿ ಸದಸ್ಯರು ಮುಖಂಡರು, ಗ್ರಾಪಂ ಸರ್ವ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.