ಹಾರೆ, ಪಿಕ್ಕಾಸಿನಿಂದಲೇ ರಸ್ತೆ ನಿರ್ಮಿಸಿದ ಸಾಹಸಿ

| Published : May 05 2024, 02:06 AM IST

ಹಾರೆ, ಪಿಕ್ಕಾಸಿನಿಂದಲೇ ರಸ್ತೆ ನಿರ್ಮಿಸಿದ ಸಾಹಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿತ್ಯ ನೂರಕ್ಕೂ ಹೆಚ್ಚು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಜತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಸ್ಥಳಿಯಾಡಳಿತಕ್ಕೆ ಮನವಿ ಮಾಡಿದರೂ ರಸ್ತೆ ನಿರ್ಮಾಣವಾಗದೇ ಇದ್ದಾಗ ಬೇಸತ್ತು ಪೇರಡ್ಕ ಗಿರಿಜನ ಕಾಲನಿ ನಿವಾಸಿಯೊಬ್ಬರು ಏರು ತಗ್ಗುಗಳಿಂದ ಕೂಡಿದ ನಡೆಯಲು ಯೋಗ್ಯವಲ್ಲದ ಸ್ಥಳದಲ್ಲಿ ಹಾರೆ, ಪಿಕ್ಕಾಸಿನಿಂದ ಚರಂಡಿ ಸಹಿತ ಸುಂದರ ರಸ್ತೆ ನಿರ್ಮಾಣ ಮಾಡಿದ್ದಾರೆ.ಕಾರ್ಕಳ ತಾಲೂಕಿನ ಮಾಳ ಗ್ರಾಮ ಪೇರಡ್ಕದ ನಿವಾಸಿ ಗೋವಿಂದ ಮಲೆಕುಡಿಯ ಎಂಬವರೇ ರಸ್ತೆ ನಿರ್ಮಿಸಿದ ಸಾಹಸಿ.

ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿತ್ಯ ನೂರಕ್ಕೂ ಹೆಚ್ಚು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಜತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.* 500 ಮೀಟರ್ ಉದ್ದ ರಸ್ತೆ ನಿರ್ಮಾಣ

ಶೃಂಗೇರಿ- ಮಾಳ - ಬಜಗೋಳಿ- ಪುಲ್ಕೇರಿ -ಮಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ ಪೇರಡ್ಕ ಬಳಿಯಿಂದ ಗಿರಿಜನ ಕಾಲನಿಯ ಬುಗಟುಗುಂಡಿ ಒಂದನೇ ವಾರ್ಡ್ ರಸ್ತೆ ವರೆಗೆ ಒಟ್ಟು ಸುಮಾರು 500 ಮೀಟರ್ ರಸ್ತೆಯನ್ನು ಗೋವಿಂದ ಮಲೆಕುಡಿಯ ಐದು ವರ್ಷಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಅದರ ಜೊತೆಗೆ ಮಳೆಗಾಲದಲ್ಲಿ ನೀರು ಸಾಗಲು ಚರಂಡಿ ವ್ಯವಸ್ಥೆಯನ್ನು ಕೂಡ ಇವರೇ ನಿರ್ಮಿಸಿದ್ದಾರೆ. ಈ ರಸ್ತೆಗೆ ಶಾಸಕ ಸುನೀಲ್ ಕುಮಾರ್ ಸ್ಪಂದಿಸಿ ಮೂರು ಮೋರಿಗಳ ನಿರ್ಮಾಣ ಮಾಡಿಸಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಈ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಗೋವಿಂದ ಮಲೆಕುಡಿಯ ಮನವಿ‌ ಮಾಡುತ್ತಿದ್ದಾರೆ.

* ಲೋಕಾಯುಕ್ತಕ್ಕೆ ದೂರು: ರಸ್ತೆ ಅಭಿವೃದ್ಧಿ

ಪರಿಸರ ಹೋರಾಟಗಾರ್ತಿ ಮಾಳದ ಆರತಿ ಅಶೋಕ್ ನೇತೃತ್ವದಲ್ಲಿ ಇಲ್ಲಿ ಟಾರ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಕಳೆದ ವರ್ಷ ಮಾರ್ಚ್ 3ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತರು ರಸ್ತೆ ಅಭಿವೃದ್ಧಿಗೊಳಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದರು. ಆದರೆ ಒಂದನೇ ವಾರ್ಡ್‌ನಿಂದ ಬುಗಡುಗುಂಡಿ ವರೆಗೆ ಸುಮಾರು 200 ಮೀಟರ್ ರಸ್ತೆಯನ್ನು ಜೆಸಿಬಿ ಮೂಲಕ ಅಗಲೀಕರಣಗೊಳಿಸಲಾಗಿದೆ ಹೊರತು ಟಾರ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಿಲ್ಲ.

* ಪರಿಸರ ಪ್ರೇಮಿ : ಪರಿಸರ ಪ್ರೇಮಿಯಾಗಿರುವ ಗೋವಿಂದ ಮಲೆಕುಡಿಯ ಅವರಿಗೆ 55 ವರ್ಷ ಪ್ರಾಯ. ಕಳೆದ ಮೂವತ್ತು ವರ್ಷಗಳಿಂದ ಕೂಲಿ ಕೆಲಸದ ಜೊತೆ ಅರಣ್ಯ ಇಲಾಖೆಯ ಜೊತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸಿ ಬೆಳೆಸುತ್ತಿದ್ದಾರೆ. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕೆಲಸ ಬಿಟ್ಟು ಮನೆಗೆಲಸ ಜೊತೆ, ರಸ್ತೆ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡರು.

* ಸೌಲಭ್ಯ ಕೊಡಿ: ಗೋವಿಂದ ಮಲೆಕುಡಿಯ ಅವರು ಸಾಕ್ಷರತೆ ಆಂದೋಲನದಡಿಯಲ್ಲಿ ಓದಿದ್ದಾರೆ. ಆದರೆ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆ ಫಲಾನುಭವಿ ಕೂಡ ಅಲ್ಲ. ಯಾವುದೇ ಇತರ ಸರ್ಕಾರಿ ಸವಲತ್ತು ಕೂಡ ಪಡೆದುಕೊಂಡಿಲ್ಲ.

* ನೆರಳಿಗಾಗಿ ಗಿಡನೆಟ್ಟರು: ಗೋವಿಂದ ಮಲೆಕುಡಿಯ ಮೂಲತಃ ಕೃಷಿಕರಾಗಿದ್ದು, ರಸ್ತೆಯಲ್ಲಿ ಸಾಗುವ ದಾರಿಹೋಕರಿಗೆ ಅನುಕೂಲವಾಗುವಂತೆ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಮಳೆಗಾಲದ ಸಮಯದಲ್ಲಿ ಶೃಂಗೇರಿ- ಮಾಳ- ಬಜಗೋಳಿ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ ನೆಡುವ ಯೋಜನೆಯನ್ನು ಹೊಂದಿದ್ದಾರೆ.

----ಈ ರಸ್ತೆ ನಿರ್ಮಾಣ ಮಾಡಿದ ಕಾರಣ ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ಸಾಗುತ್ತಾರೆ. ಅವರ ನಗು ನನಗೆ ಪ್ರೇರಣೆಯಾಗಿದೆ. ಎಲ್ಲರೂ ಖುಷಿಯಿಂದ ಸಂಚರಿಸುವಾಗ ಸಮಾಧಾನ ತರಿಸುತ್ತದೆ. ಪರಿಸರವಿದ್ದರೆ ಮಾತ್ರ ನಮ್ಮ ಬದುಕು. ನಾಳೆ ಪರಿಸರವಿಲ್ಲದಿದ್ದರೆ ನಮ್ಮ ಬದುಕಿಲ್ಲ. ಕಾಡಿನಲ್ಲಿ ಅರಣ್ಯ ಇಲಾಖೆಯಿಂದ ಗಿಡನೆಟ್ಟಿದ್ದೇನೆ. ಈ ಬಾರಿ ಹೆದ್ದಾರಿಯ ಪಕ್ಕದಲ್ಲಿ ನೂರಕ್ಕೂ ಹೆಚ್ಚು ಗಿಡನೆಡಬೇಕು ಎಂದು ಯೋಜನೆ ರೂಪಿಸಿದ್ದೇನೆ.

। ಗೋವಿಂದ ಮಲೆಕುಡಿಯ, ಪೇರಡ್ಕ ಮಾಳ

------------ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕವೇ ಒಂದನೇ ವಾರ್ಡ್‌ನಿಂದ ಬುಗಡುಗುಂಡಿ ವರೆಗೆ ಸುಮಾರು 200 ಮೀಟರ್ ರಸ್ತೆಯನ್ನು ಜೆಸಿಬಿ ಮೂಲಕ ಅಗಲೀಕರಣಗೊಳಿಸಲಾಗಿದೆ ಹೊರತು ಟಾರ್ ರಸ್ತೆಯನ್ನಾಗಿ ಅಭಿವೃದ್ಧಿ ಗೊಳಿಸಿಲ್ಲ. ಕಾರ್ಕಳ ತಾಲೂಕಿನ ಸಮಗ್ರ ಅಭಿವೃದ್ಧಿಗೊಳಿಸಿದ ಶಾಸಕ ಸುನಿಲ್ ಕುಮಾರ್, ಈ ರಸ್ತೆಗೆ ಮೋರಿ ನಿರ್ಮಾಣ ಮಾಡಲು ಸಹಕರಿಸಿದ್ದರು. ಈಗ ಡಾಂಬರೀಕರಣಕ್ಕೆ ಅನುದಾನ ನೀಡುವ ವಿಶ್ವಾಸ ನಮಗಿದೆ.। ಮಾಳ ಆರತಿ ಅಶೋಕ್, ಪರಿಸರ ಹೋರಾಟಗಾರ್ತಿ---------------------

ಗೋವಿಂದ ಮಲೆಕುಡಿಯ ಪ್ರತಿ ವರ್ಷ ರಸ್ತೆ ಕೆಲಸ ಮಾಡುತ್ತಿದ್ದಾರೆ. ಆದರೆ ರಸ್ತೆಗೆ ಅನುದಾನ ಮೀಸಲಿಡಲು ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಪ್ರಸ್ತಾಪ ಕಳಿಸಲಾಗುವುದು.

। ಉಮೇಶ್ ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಮಾಳ

-----------------ರಸ್ತೆ ನಿರ್ಮಾಣ ಮಾಡುತ್ತಿರುವ ಗೋವಿಂದ ಮಲೆಕುಡಿಯ ಅವರ ಸಾಹಸ ನಿಜಕ್ಕೂ ಮೆಚ್ಚುವಂಥದ್ದು. ಅವರು ನಿರ್ಮಿಸಿದ ರಸ್ತೆಯಲ್ಲಿ ರಿಕ್ಷಾದಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದೇನೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿತ್ತು. ಅವರಿಗೆ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳು ದೊರಕಬೇಕು.

। ನಾಗೇಶ್ ನಾಯಕ್, ಆಟೋ ಚಾಲಕರು ಮಾಳ