ಅಭಿವೃದ್ಧಿಗೆ ಗ್ರಾಮಸ್ಥರ ಸಲಹೆ ಅಗತ್ಯ: ರಾಹುಲ್

| Published : Oct 17 2024, 12:52 AM IST / Updated: Oct 17 2024, 12:53 AM IST

ಸಾರಾಂಶ

ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗ್ರಾಮಸ್ಥರ ಸಲಹೆ ಮತ್ತು ಸಹಕಾರ ಅತ್ಯವಶ್ಯಕವಾಗಿದೆ.

ಜನರ ಸಮಸ್ಯೆ ಆಲಿಸಿದ ಜಿಪಂ ಸಿಇಒ

ಮುಸ್ಟೂರು ಗ್ರಾಮದಲ್ಲಿ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಕಾರಟಗಿ

ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗ್ರಾಮಸ್ಥರ ಸಲಹೆ ಮತ್ತು ಸಹಕಾರ ಅತ್ಯವಶ್ಯಕವಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.

ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯಿತಿ ಆವರಣದಲ್ಲಿನ ಗ್ರಂಥಾಲಯದಲ್ಲಿ ಮಂಗಳವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮದಲ್ಲಿ ವಿವಿಧ ಯೋಜನೆಯಡಿ ನಿರ್ಮಾಣವಾಗುವ ಕಾಮಗಾರಿಗಳಿಗೆ ಗ್ರಾಪಂ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರ ಅಭಿಪ್ರಾಯ ತುಂಬಾ ಮುಖ್ಯವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿ ಬಗೆಹರಿಸಿಕೊಂಡು, ಸಾರ್ವಜನಿಕರ ಕೆಲಸಕ್ಕೆ ಕೂಡಲೇ ಸ್ಪಂದನೆ ನೀಡಿ ಎಂದರು.

ತುಂಗಭದ್ರಾ ನದಿಯ ಪ್ರವಾಹ ಬಂದು ಸ್ಥಳಾಂತರಗೊಂಡ ಹಳ್ಳಿಗಳ ಬಗ್ಗೆ ಮಾಹಿತಿ ಪಡೆದರು. ಊರಿನಲ್ಲಿ ಹೊಸ ರಸ್ತೆಗಳ ಅಭಿವೃದ್ಧಿ ಪಡಿಸಲು ಸ್ಥಳೀಯರ ವಿರೋಧ ಪಡಿಸುವ ಬಗ್ಗೆ ಚರ್ಚಿಸಿದರು, ಜೆಜೆಎಂ ಕಾಮಗಾರಿ ಅನುಷ್ಠಾನ ಸಂಬಂಧಿಸಿದಂತೆ ನಲ್ಲಿಗಳಲ್ಲಿ ಗ್ರಾಮಸ್ಥರಿಗೆ ದಿನಂಪ್ರತಿ ನೀರು ಸರಬರಾಜು ಆಗುವ ಬಗ್ಗೆ ಗಮನಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಎಇಇ ಅವರಿಗೆ ಸೂಚನೆ ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರ ಸಂಖ್ಯೆ, ಸಕ್ರಿಯ ಜಾಬ್ ಕಾರ್ಡ್ ಗಳ ವಿವರ, ನರೇಗಾದಡಿ ಅನುಷ್ಠಾನವಾದ ಶಾಲಾ ಅಭಿವೃದ್ಧಿ, ವೈಯಕ್ತಿಕ ಕಾಮಗಾರಿಗಳ ವಿವರ ಹಾಗೂ ಅನುಮೋದನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಹಾಗೂ 15ನೇ ಹಣಕಾಸು ಯೋಜನೆಯಡಿ ಅನುಷ್ಠಾನ ಮಾಡಬೇಕಾದ ಕಾಮಗಾರಿ ಬಗ್ಗೆ ಚರ್ಚಿಸಿದರು.

ಸ್ವಚ್ಛ ಭಾರತ ಮೀಷನ್ ಗ್ರಾಮೀಣ ಯೋಜನೆಯಡಿ ಶೌಚಾಲಯಗಳ ನಿರ್ಮಾಣಕ್ಕೆ ವಿಷಯದ ಬಗ್ಗೆ ಚರ್ಚಿಸಿ, ಕಳೆದ ಸಾಲಿನಲ್ಲಿ ಅನುಷ್ಠಾನವಾದ ಶೌಚಾಲಯಗಳ ಮಾಹಿತಿ, ಈಗಾಗಲೇ ನಿರ್ಮಿಸಿದ ಶೌಚಾಲಯಗಳಿಗೆ ಪಾವತಿಯಾಗಬೇಕಾಗದ ಬಾಕಿ ಹಣದ ಮಾಹಿತಿ ಪರಿಶೀಲಿಸುವಂತೆ ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ನಿರ್ವಹಣೆ, ಗ್ರಾಪಂನಲ್ಲಿ ಸಮಿತಿ ಸಭೆ ಮಾಡಿ, ಕಸ ವಿಲೇವಾರಿ ನಿರ್ವಹಣೆ ಪ್ರಾರಂಭಿಸುವ ಕುರಿತಂತೆ ಸಭಾ ನಡಾವಳಿಗಳಿ ಮಾಡುವಂತೆ ತಿಳಿಸಿದರು.ಅಂಗನವಾಡಿ ಭೇಟಿ:

ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಹಾಜರಾತಿ ವಹಿಗಳು, ಪೌಷ್ಟಿಕಾಂಶ ಆಹಾರ ವಿತರಣೆಗೆ ಸಂಬಂಧಿಸಿದಂತೆ ಚರ್ಚಿಸಿ, ಮಕ್ಕಳ ತೂಕ, ಎತ್ತರದ ಬೆಳವಣಿಗೆ ಕುರಿತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಅಂಗನವಾಡಿ ಕಾರ್ಯಕರ್ತರ ತರಬೇತಿ ಮಾರ್ಗದರ್ಶನ ಕೈಪಿಡಿಯನ್ನು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿತರಣೆ ಮಾಡಿದರು.ವಿವಿಧೆಡೆ ಪರಿಶೀಲನೆ:

ಸಮುದಾಯ ಶೌಚಾಲಯ ಸ್ಥಳ, ರಸ್ತೆಗಳ ಅಭಿವೃದ್ಧಿ ಪರಿಶೀಲನೆ ಮಾಡಿದರು. ನಂತರ ಮುಸ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಜನನ, ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಯ ಮಾಹಿತಿ ಪಡೆದು, ಆಸ್ಪತ್ರೆಯ ದಾಖಲೆ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಜಿಪಂ ಸಿಇಒ ಅವರಿಗೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ತಾಮ್ರಪಲ್ಲಿ ಬೋರ್ ವೆಲ್ ದುರಸ್ತಿ, ಅಂಜೂರಿ ಕ್ಯಾಂಪ್ ಓ.ಎಚ್.ಟಿ ಟ್ಯಾಂಕ್ ನೆಲಸಮ ಮಾಡುವ ಕುರಿತು ಸ್ಥಳ ಪರಿಶೀಲನೆ ಮಾಡಿ, ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಗತಿಯಲ್ಲಿರುವ ಶೌಚಾಲಯ ಪರಿಶೀಲಿಸಿ, ನರೇಗಾದಡಿ ಶಾಲೆಯ ಮೈದಾನ ಅಭಿವೃದ್ಧಿ ಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ತಾಪಂ ಇಒ ಅಧಿಕಾರಿ ಲಕ್ಷ್ಮೀದೇವಿ, ಪಿಆರ್ ಡಿ ಎಇಇ ವಿಜಯ್ ಕುಮಾರ್, ತಾಪಂ ಸಹಾಯಕ ನಿರ್ದೇಶಕಿ ವೈ. ವನಜಾ, ಕನಕಪ್ಪ ಸಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರೀ, ವಿರೂಪಾಕ್ಷ , ಗ್ರಾಪಂ ಅಧ್ಯಕ್ಷ ಸುರೇಶ್ ಬಿ., ವಲಯ ಅರಣ್ಯ ಅಧಿಕಾರಿ ಸುಭಾಷ್ ಚಂದ್ರ್, ಉಪ ವಲಯ ಅರಣ್ಯ ಅಧಿಕಾರಿ ಕವಿತಾ ಎಲ್ . ನಾಯಕ್, ಪಿಡಿಒ ಸಾಯಿನಾಥ್ ಸೇರಿದಂತೆ ಇತರರಿದ್ದರು.