ಕುಮಾರಧಾರಾ ನದಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಿದ ಗ್ರಾಮಸ್ಥರು!

| Published : Feb 26 2025, 01:01 AM IST

ಕುಮಾರಧಾರಾ ನದಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಿದ ಗ್ರಾಮಸ್ಥರು!
Share this Article
  • FB
  • TW
  • Linkdin
  • Email

ಸಾರಾಂಶ

ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮವಗಿರುವ ಬಳ್ಪದ ಜನರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಪಂಜ ಮೂಲಕ ಸುಮಾರು 20 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕು.ಆದರೆ ಈ ಕುಮಾರಧಾರಾ ನದಿಯಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ 6 ಕಿ.ಮೀ. ಅಂತರದಲ್ಲೇ ಸಂಪರ್ಕಿಸಬಹುದು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮ ಬಳ್ಪ ಹಾಗು ಕೊಡಿಂಬಾಳ ಗ್ರಾಮಗಳ ಮದ್ಯ ಹರಿಯುವ ಕುಮಾರಧಾರ ನದಿಗೆ ಗ್ರಾಮಸ್ಥರು ಒಟ್ಟಾಗಿ ಹಣ ಸಂಗ್ರಹಿಸಿ ಶ್ರಮದಾನದ ಮೂಲಕ ಕೋಡಿಂಬಾಳ ಗ್ರಾಮದ ಮಜ್ಜಾರು ಕಡವು ಹಾಗು ಅತ್ತ ಬಳ್ಪ ಗ್ರಾಮದ ಕೇನ್ಯ ಎಂಬ ಪ್ರದೇಶವನ್ಬು ಸಂಪರ್ಕಿಸುವ ಜಾಗದಲ್ಲಿ ತಾತ್ಕಲಿಕ ಮಣ್ಣಿನ ರಸ್ತೆ ನಿರ್ಮಿಸುವ ಕಾರ್ಯ ನಡೆಸುತ್ತಿದ್ದಾರೆ. ಭಾನುವಾರದಿಂದ ಆರಂಭವಾದ ಕೆಲಸ ನಾಲ್ಕು ದಿನದೊಳಗಡೆ ಸಂಪೂರ್ಣಗೊಳಿಸಿ ಸಂಚಾರ ನಡೆಸಲಾಗುವ ಸಂಕಲ್ಪ ತೊಡಲಾಗಿದೆ

ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮವಗಿರುವ ಬಳ್ಪದ ಜನರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಪಂಜ ಮೂಲಕ ಸುಮಾರು 20 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕು.ಆದರೆ ಈ ಕುಮಾರಧಾರಾ ನದಿಯಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ 6 ಕಿ.ಮೀ. ಅಂತರದಲ್ಲೇ ಸಂಪರ್ಕಿಸಬಹುದು. ಇದೇ ರಸ್ತೆಯ 3 ಕಿ.ಮೀ ಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಕೋಡಿಂಬಾಳ ರೈಲ್ವೆ ನಿಲ್ದಾಣವೂ ಸಿಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರೇ ಸೇರಿಕೊಂಡು ಮಜ್ಜಾರು ಕಡವು ಎಂಬಲ್ಲಿಂದ ಬಳ್ಪ ಗ್ರಾಮದ ಕೇನ್ಯ ಎಂಬ ಪ್ರದೇಶವನ್ನು ಸಂಪರ್ಕಿಸುವ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿ ಜೊತೆಗೆ ಸಮಿತಿ ರಚಿಸಿ ಗ್ರಾಮಸ್ಥರ ಸಹಕಾರದಿಂದ ಸುಮಾರು ಐದು ಲಕ್ಷ ರು. ಮೊತ್ತ ಸಂಗ್ರಹಿಸಿ ತಾತ್ಕಾಲಿಕ ರಸ್ತೆ ಕೆಲಸ ಆರಂಭಿಸಿದ್ದಾರೆ. ಬಳ್ಪ, ಕೇನ್ಯ, ಮಜ್ಜಾರು ಭಾಗದ ಹಿರಿಯರು, ಯುವಕರು ಮಕ್ಕಳೆನ್ನದೆ ಸುಮಾರು 200ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮದಾನದ ಮೂಲಕ ಈ ರಸ್ತೆ ನಿರ್ಮಾಣದ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ. ನಾಲ್ಕು ದಿನದೊಳಗಡೆ ತಾತ್ಕಾಲಿಕ ರಸ್ತೆ ಕೆಲಸ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಸುಮಾರು 200 ಮೀಟರ್ ಉದ್ದದ ರಸ್ತೆಯನ್ನು ಕಲ್ಲು, ಮಣ್ಣು, ಮರಳು, ಮತ್ತು ಸುಮಾರು 16 ಸಿಮೆಂಟ್ ಪೈಪ್​ ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿದ್ದಾರೆ. ಈ ತಾತ್ಕಾಲಿಕ ರಸ್ತೆ ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗಲಿದೆ. ಮುಂದಿನ ವರ್ಷ ಬೇಸಿಗೆ ಕಾಲದಲ್ಲಿ ಮತ್ತೆ ಪುನ‌ರ್ ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲಿ ಶಾಶ್ವತ ಸಂಪರ್ಕ ಸೇತುವೆ ಬೇಡಿಕೆ ಈಡೇರಿದರೆ ಕಡಬ, ಕೋಡಿಂಬಾಳ ರೈಲ್ವೆ ನಿಲ್ದಾಣ, ಪ್ರಸಿದ್ಧ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ಮಂಗಳೂರು, ಬೆಂಗಳೂರು ಮತ್ತು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಕೊಂಡಿಯಾಗಲಿದೆ.

ಬಳ್ಪ ಸಂಸದರ ಆದರ್ಶ ಗ್ರಾಮವಾಗಿರುವುದರಿಂದ ಈ ಸೇತುವೆ ಸಂಪರ್ಕ ಕಲ್ಪಿಸುವ ಬಳ್ಪ ಗ್ರಾಮದ ರಸ್ತೆಗಳು ಈಗಾಗಲೇ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಕ್ರೀಟಿಕರಣವಾಗಿವೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಮಜ್ಜಾರುಕಡವು ಭಾಗದಲ್ಲಿ ಸರ್ವ ಋತು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.......................ಬಳ್ಪ ಹಾಗು ಕೊಡಿಂಬಾಳ ಗ್ರಾಮಸ್ಥರು ಹಾಗು ಸಾರ್ವಜನಿಕರ ಹಣ‌ ಮತ್ತು ಶ್ರಮ ಸೇವೆಯಿಂದ ತಾತ್ಕಲಿಕ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಈ ರಸ್ತೆ ನದಿ ನೀರಿನಲ್ಲಿ ಮುಳುಗಡೆಯಾಗಲಿದೆ. ಹಾಗಾಗಿ ಇಲ್ಲೊಂದು ಸರ್ವ ಋತು ಸೇತುವೆ ಬೇಕೆಂಬ ಹಕ್ಕೊತ್ತಾಯ ಮಾಡಲಾಗುವುದು. ಇದಕ್ಕಾಗಿ ಸಾರ್ವಜನಿಕರ ಸಹಕಾರದೊಂದಿಗೆ ಎರಡು ಗ್ರಾಮಸ್ಥರ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ದಿನಗಳಲ್ಲಿ ಹೊರಟ ನಡೆಸಲು ಚಿಂತನೆ ನಡೆಸಲಾಗಿದೆ.

-ವಾಸುದೇವ ಕೆರೆಕೊಡಿ, ಸಂಚಾಲಕ, ಕೊಡಿಂಬಾಳ-ಬಳ್ಪ ತಾತ್ಕಲಿಕ ರಸ್ತೆ ನಿರ್ಮಾಣ ಸಮಿತಿ.